ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಮಾಹಿತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಪ್ರಮಾಣಪತ್ರ ವಿತರಿಸಿದರು. ಗೀತಾ ರಮೇಶ್, ಶರತ್‌ಕುಮಾರ್, ಕುರಿಯಾಕೋಸ್, ಬಿ.ಗಣಪತಿ, ಜ್ಯೋತಿ ಗಣೇಶ್, ಜ್ಯೋತಿ ಮೋಹನ್ ಇತರರಿದ್ದರು. 
ಜಿಲ್ಲೆ

ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ

Shivamogga - Desk - Praveena Kumar S

ತೀರ್ಥಹಳ್ಳಿ: ಸಕೇಂದ್ರ ಸರ್ಕಾರದ ವಿಕಸಿತ ಭಾರತ ಘೋಷಣೆ ಕೇವಲ ಭಾಷಣವಲ್ಲ. ಈ ದೇಶದ ಹಳ್ಳಿ ಜನರ ಹೃದಯ ತಲುಪುವ ಡೆಲ್ಲಿ ಸರ್ಕಾರದ ಜನಪರ ಯೋಜನೆಗಳನ್ನು ಹೊಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿ ಶನಿವಾರ ಆಯೋಜಿಸಲಾಗಿದ್ದ ವಿಕಸಿತ ಭಾರತ ಮಾಹಿತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿ, ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಿತವನ್ನು ಬಯಸಿರುವ ನರೇಂದ್ರ ಮೋದಿ ಸರ್ಕಾರದ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೇ ತಲುಪಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ವಿವರಿಸಿದರು.
ಸರ್ಕಾರದ ಕೆಲವು ಯೋಜನೆಗಳು ಜನರ ಮಾಹಿತಿಗೆ ಬಾರದೆ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಜನರಿಗೆ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬ್ಯಾಂಕ್ ಮ್ಯಾನೇಜರ್‌ಗಳು ಸಾಲ ವಸೂಲಿಗೆ ಮಾತ್ರ ಬಡವರ ಮನೆ ಬಾಗಿಲಿಗೆ ಬರುತ್ತಿದ್ದರು. ಇದೀಗ ಜೀರೋ ಬ್ಯಾಲೆನ್ಸ್ ಮೂಲಕ ಜನಧನ ಖಾತೆ ತೆರೆಯಲಾಗಿದ್ದು ಸರ್ಕಾರದ ಎಲ್ಲ ಸೌಲಭ್ಯಗಳೂ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ ಎಂದರು.
ತಾಲೂಕಿನ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ 504 ಕೋಟಿ ರೂ. ಮಂಜೂರು ಮಾಡಿದೆ. 530 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಮಾರ್ಗ, 80 ಕೋಟಿ ರೂ ವೆಚ್ಚದಲ್ಲಿ ಮೇಗರವಳ್ಳಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳೂ ಶೀಘ್ರದಲ್ಲಿ ಆರಂಭಗೊಳ್ಳಲಿವೆ. ಹಳ್ಳಿಹಳ್ಳಿಗೂ ರಸ್ತೆ ಸಂಪರ್ಕದ ಸಲುವಾಗಿ ನೂರಾರು ಕೋಟಿ ಅನುದಾನ ತಾಲೂಕಿಗೆ ಹರಿದು ಬಂದಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದ್ದು 2047ರ ಹೊತ್ತಿಗೆ ಈ ದೇಶ ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿಗೆ ಏರುವುದು ಖಚಿತ ಎಂದು ಹೇಳಿದರು.
ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯಿಂದ ಪಟ್ಟಣದ 198 ಮಂದಿ ಬೀದಿ ಬದಿಯ ವ್ಯಾಪಾರಿಗಳು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಬಳಸಿಕೊಂಡು ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೂನಿಯನ್ ಬ್ಯಾಂಕಿನ ಮ್ಯಾನೇಜರ್ ಶರತ್‌ಕುಮಾರ್ ಮತ್ತು ಪಪಂ ಮುಖ್ಯಾಧಿಕಾರಿ ಕುರಿಯಾ ಕುರಿಯಾ ಕೋಸ್ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಪಂ ಸದಸ್ಯರಾದ ಬಿ.ಗಣಪತಿ, ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ ಶೆಟ್ಟಿ, ಜ್ಯೋತಿಗಣೇಶ್, ಜ್ಯೋತಿ ಮೋಹನ್ ಇದ್ದರು.