ಜಿಲ್ಲೆ

ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪಲಿ

ಭಟ್ಕಳ: ಸಮಾಜದ ಕಟ್ಟಕಡೆಯ ಬಡವನಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಎಲ್ಲ ಅಧಿಕಾರಿಗಳು ನೋಡಿಕೊಳ್ಳಬೇಕು. ಮೂಲ ಸೌಕರ್ಯ, ಕೃಷಿ, ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ಕಚೇರಿಗಳಲ್ಲಿ ಜನಸ್ನೇಹಿ ವಾತವರಣ ನಿರ್ಮಾಣವಾಗಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಕಮಲಾವತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ‘ಜನಸ್ಪಂದನಾ ಕಾರ್ಯಕ್ರಮ ಕಾಟಚಾರದ ಕಾರ್ಯಕ್ರಮವಲ್ಲ. ಅಹವಾಲು ಸಲ್ಲಿಸುವ ಪ್ರತಿ ಸಾಮಾನ್ಯ ಜನರ ಮನವಿಗೂ ಸ್ಪಂದಿಸಿ ಅವರಿಗೆ ಸೂಕ್ತ ಪರಿಹಾರ ಸೂಚಿಸಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಜನಸಾಮಾನ್ಯರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಮತ್ತು ನಾವು ಅವರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ 35 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ, ಅಂಗವಿಕಲರಿಗೆ ಉಚಿತ ಸ್ಕೂಟರ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಅನ್ನು ವಿತರಿಸಲಾಯಿತು.

ಎಂಡೋಸಲ್ಫಾನ್ ಪೀಡಿತ ಮಕ್ಕಳು ಊಟವಿಲ್ಲದೇ ಬದುಕಬಹುದು ಆದರೆ, ಔಷಧವಿಲ್ಲದೇ ಬದುಕಲು ಸಾಧ್ಯವಿಲ್ಲ. ಈ ಹಿಂದೆ ಖಾಸಗಿ ಸಂಸ್ಥೆಯವರು ಮನೆಮನೆಗೆ ಬಂದು ಔಷಧ ಆಹಾರ ನೀಡುತಿದ್ದರು. ಆದರೆ, ಕಳೆದ 5 ತಿಂಗಳಿನಿಂದ ಅದು ನಿಂತು ಹೋಗಿದೆ. ಬಡ ಕುಟುಂಬದವರು ತಮ್ಮ ಎಂಡೋಸಲ್ಪಾನ್ ಪೀಡಿತ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ. ಮೌಲ್ಯದ ಔಷಧ ಹೇಗೆ ಕೊಡಿಸುತ್ತಾರೆ. ದಯವಿಟ್ಟು ಅಂತಹ ಮಕ್ಕಳಿಗೆ ಔಷಧ ನೀಡಿ. ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ. ಗುಣಮಟ್ಟದ ಪೌಷ್ಠಿಕ ಆಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ನಿವೃತ್ತ ಪ್ರೊ. ಎ.ಎಂ. ಮುಲ್ಲಾ ಸಚಿವರ ಗಮನಕ್ಕೆ ತಂದರು.

ಮನೆಯಲ್ಲಿ ಅಸ್ತಮಾ ಪೀಡಿತ ಪತ್ನಿ ಇದ್ದಾರೆ. ವಾಸಿಸಲು ಯೋಗ್ಯ ಮನೆ ಕೂಡ ಇಲ್ಲ. ಅರಣ್ಯ ಇಲಾಖೆಯವರು ಮನೆ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಒಂದು ಗುಂಟೆ ಜಾಗನಾದರೂ ಮಂಜೂರಿ ಮಾಡಿಸಿ ನಮ್ಮ ಕುಟುಂಬ ಉಳಿಸಿ ಎಂದು ಶಿರಸಿ ಇಟಗುಳಿ ಗ್ರಾಮ ಪಂಚಾಯಿತಿ ನಿವಾಸಿ ನವಾಬ್ ಸಾಬ್ ಕೋರಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ನೈಜ ಕಾರ್ಮಿಕರ ಕಾರ್ಮಿಕ ಕಾರ್ಡ್‌ಗಳನ್ನು ರದ್ದು ಪಡಿಸುತ್ತಿದ್ದಾರೆ ಜೆ.ಎನ್. ರೇವಣಕರ್ ದಾಖಲಾತಿ ಸಮೇತ ಸಭೆಯ ಗಮನಕ್ಕೆ ತಂದರೆ, ಅಧಿಕಾರಿಗಳು ಗ್ರಾಮೀಣ ಭಾಗದ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ ದೂರಿದರು.

ಅಧಿಕಾರಿ ವಿರುದ್ಧ ಆಕ್ರೋಶ: ಅವೈಜ್ಞಾನಿಕ ರಸ್ತೆ ವಿಸ್ತರಣೆ ಕಾಮಾಗಾರಿಯಿಂದ ನಿತ್ಯ ಅಪಘಾತವಾಗುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಂತೆ ಆಕ್ರೋಶಗೊಂಡ ಸಚಿವರು, ರಸ್ತೆ ಕಾಮಾಗಾರಿ ಪೂರ್ಣಗೊಳಿಸಲು ನಿಮಗೇನು ತೊಂದರೆ? ಎಂದು ಹೆದ್ದಾರಿ ಅಧಿಕಾರಿ ಅಮರ್ ಅವರನ್ನು ಪ್ರಶ್ನಿಸಿದರು. ಅಂಡರ್‌ಪಾಸ್ ನಿರ್ಮಿಸಬೇಕಾದ ಸ್ಥಳ ಬಿಟ್ಟು ಉಳಿದ ಕಡೆ ರಸ್ತೆ ಕಮಾಗಾರಿ ಏಕೆ ಪೂರ್ಣ ಮಾಡುತ್ತಿಲ್ಲ. ವೆಂಕಟಾಪುರ ಸೇತುವೆಯನ್ನು ಏಕೆ ಬಂದ್ ಮಾಡಲಾಗಿದೆ. ಇನ್ನೆಷ್ಟು ಜನ ನಿಮ್ಮ ಕಾರಣದಿಂದ ಸಾಯಬೇಕು. ಇನ್ನೂ ಮುಂದೆ ಹೆದ್ದಾರಿಯಲ್ಲಿ ಅಪಘಾತವಾದರೆ ಐಆರ್‌ಬಿಯವರನ್ನು ಸೇರಿಸಿ ಕೇಸ್ ದಾಖಲು ಮಾಡಿ ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಖಾಂದೂ, ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ.ವಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ಪುರಸಭೆ ಅಧ್ಯಕ್ಷ ಅಲ್ತಾಫ್ ಖರೂರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.