ಜಿಲ್ಲೆ

ಮೈಸೂರಿನಲ್ಲಿ ಸರ್ಕಾರಿ ನೌಕರರ ಮುಷ್ಕರ

Mysuru

ಮೈಸೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಿಂದ ವರದಿ ಪಡೆದು ಶೇ.40 ರಷ್ಟು ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಬುಧವಾರ ಜಿಲ್ಲೆಯಲ್ಲಿ ಮುಷ್ಕರ ನಡೆಸಿದರು. ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ನೌಕರರು ಮಧ್ಯಾಹ್ನ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು. ಉಳಿದಂತೆ ಎಲ್ಲ ನೌಕರರು ಕಚೇರಿಯಿಂದ ಹೊರ ಬಂದು ಮುಷ್ಕರ ನಡೆಸಿದರು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸಿದ ಸಾರ್ವಜನಿಕರು ನಿರಾಶೆಯಿಂದ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದ ಜನರಿಗೆ ಮುಷ್ಕರದ ವಿಚಾರವನ್ನು ಪೊಲೀಸರು ತಿಳಿಸಿ ಹಿಂದಕ್ಕೆ ಕಳುಹಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ನೌಕರರು ಇಲ್ಲದೆ ಬಣಗುಡುತಿತ್ತು.

ಕೆ.ಆರ್. ಆಸ್ಪತ್ರೆಯ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯ ಮೇಲೆ ಸಣ್ಣದಾದ ಪರಿಣಾಮ ಬೀರಿತು. ವೈದ್ಯರು ಎಂದಿನಂತೆ ಕಾರ್ಯನಿರ್ವಹಿಸಿದರು. ಇವರೊಂದಿಗೆ ಗುತ್ತಿಗೆ ನೌರರು ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಮಧ್ಯಾಹ್ನ ನಂತರ ಆರೋಗ್ಯ ಸೇವೆ ಎಂದಿನಂತೆ ಮುಂದುವರೆಯಿತು. ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಆರೋಗ್ಯ ಸೇವೆ ನೀಡುವಲ್ಲಿ ಸ್ವಲ್ಪ ವಿಳಂಬವಾಯಿತು.

ಮೈಸೂರು ವಿಶ್ವ ವಿದ್ಯಾಲಯದ ನೌಕರರು ಕ್ರಾಫರ್ಡ್ ಭವನದ ಮುಂಭಾಗ ಒಟ್ಟು ಸೇರಿ 7ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿದರು. ಮುಷ್ಕರದಲ್ಲಿ ಮೈಸೂರು ವಿಶ್ವ ವಿದ್ಯಾಲಯ ಆಡಳಿತ ಸಿಬ್ಬಂದಿ ವರ್ಗದವರ ಸಂಘದ ಅಧ್ಯಕ್ಷ ಪಿ. ಮೆರವಣ್ಣ, ಉಪಾಧ್ಯಕ್ಷ ಎಂ.ಡಿ. ಚನ್ನಬಸಪ್ಪ, ಕಾರ್ಯದರ್ಶಿ ಡಿ. ಶಿವಣ್ಣ, ಸಹ ಕಾರ್ಯದರ್ಶಿಗಳಾದ ಹೇಮಲತಾ, ಮಂಜುಳಾ, ಖಜಾಂಚಿ ಪುರುಷೋತ್ತಮ ಹಾಗೂ ಇತರರು ಪಾಲ್ಗೊಂಡಿದ್ದರು. ಇದೇ ರೀತಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಕಚೇರಿ ಕೆಲಸ ಕಾರ್ಯಗಳು ಮಧ್ಯಾಹ್ನವರೆಗೆ ಸಂಪೂರ್ಣ ಸ್ತಬ್ಧಗೊಂಡಿತ್ತು.