ಜಿಲ್ಲೆ

ಸರ್ಕಾರಿ ನೌಕರರು ಪ್ರಾಮಾಣಿಕತ್ವ ಪಾಲಿಸಲಿ

ಕೋಲಾರ ಡೆಸ್ಕ್

ಮುಳಬಾಗಿಲು: ಈ ಹಿಂದಿನ ಶಾಸಕನಂತೆ ನಾನಲ್ಲ, ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತಡೆ ಒಡ್ಡಿ ಕೆಲಸ ಮಾಡಿಕೊಡಲು ಕೈಒಡ್ಡಿ ಲೋಕಾಯುಕ್ತಕ್ಕೆ ಸಿಕ್ಕಿಹಾಕಿಕೊಂಡಾಗ ನಿಮ್ಮ ಕುಟುಂಬವನ್ನು ಬೀದಿಗೆ ಹಾಕಿಕೊಳ್ಳಬೇಡಿ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಎಚ್ಚರಿಕೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ಕೋಮುಲ್​ ಶಿಬಿರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ತಾಲೂಕು ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಎಚ್ಚರಿಕೆ ನೀಡಿದರೂ ಹಲವು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈಗ ಸಿಕ್ಕಿಬಿದ್ದಿರುವ 3 ಇಲಾಖೆಗಳ ಜತೆಗೆ ಇನ್ನು 7 ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ಬಲಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ, ನೀವು ಜಾಣರಾಗಿದ್ದರೆ ಜನರೇನು ದಡ್ಡರೇ, ನೀವು ಪಿಡಿಸಿದರೆ ಅಥವಾ ಬ್ರೋಕರ್​ಗಳ ಮೂಲಕ ಭ್ರಷ್ಟಾಚಾರಕ್ಕೆ ಯತ್ನಿಸಿದರೂ ಅವರೊಟ್ಟಿಗೆ ನೀವು ಲಾಕ್​ ಆಗುವುದು ಖಚಿತ ಎಂದರು.

ನಾನೇನಾದರೂ ಭ್ರಷ್ಟರ ವಿರುದ್ಧ ಕ್ರಮಕ್ಕೆ ಮುಂದಾದರೆ ಅಂಥವರೆಲ್ಲರೂ ನನ್ನ ಮೇಲೆ ದೂರು ಎಳೆದುಕೊಂಡು ಕೊತ್ತೂರು ಬಳಿ ಹೋಗಿ ಸರ್ಕಾರದ ಮೂಲಕ ತಡೆ ಮಾಡಿಕೊಂಡು ಬರುತ್ತಾರೆ. ಅಂಥವರನ್ನು ಇಲ್ಲಿಂದ ಯಾವ ರೀತಿ ಜಾಗ ಖಾಲಿ ಮಾಡಿಸಬೇಕೆಂಬುದು ಗೊತ್ತಿದೆ. ಆ ರೀತಿ ತೊಂದರೆ ತೆಗೆದುಕೊಳ್ಳಬೇಡಿ ಸಿಕ್ಕಿರುವ ಸರ್ಕಾರಿ ಉದ್ಯೋಗಕ್ಕೆ ನ್ಯಾಯ ಕೊಡಿ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಿಗೆ ಆಹಾರ ಪದಾರ್ಥಗಳು ಸರಬರಾಜು ಆಗದೆ ಇರುವ ಬಗ್ಗೆ ಇದುವರೆಗೂ ಗಮನಕ್ಕೆ ತಂದಿಲ್ಲ. ಸರ್ಕಾರಿ ಶಾಲೆಗಳ ದುರಸ್ತಿಗೆ 8 ಕೋಟಿ ರೂ. ಅನುದಾನ ಬೇಕಾಗಿದ್ದು, ತಕ್ಷಣಕ್ಕೆ ಸ್ವಲ್ಪ ಅನುದಾನವನ್ನು ಕೊಡಲಾಗಿದೆ. ಸರ್ಕಾರಕ್ಕೆ ಎಲ್ಲ ಸಮಸ್ಯೆಗಳ ಬಗ್ಗೆ ಪತ್ರ ಬರೆದು ಗಮನ ಸೆಳೆಯಲಾಗಿದ್ದು, ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.

ನಂಗಲಿಯಲ್ಲಿ ಖಾಸಗಿ ವಿದ್ಯಾಸಂಸ್ಥೆಗೆ ಇನ್ಫೋಸಿಸ್​ ಸಂಸ್ಥೆ ಸಿಎಸ್​ಆರ್​ ಅನುದಾನದಲ್ಲಿ ಶಾಲಾ ಕಟ್ಟಡ ಕಟ್ಟಿಕೊಟ್ಟಿದ್ದು, ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಡೊನೇಷನ್​ ಪಡಿಯಲಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಉದ್ಭವವಾಗಿದ್ದರೂ ಅಧಿಕಾರಿಗಳು ಏಕೆ ಸುಮ್ಮನಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು.

ತಾಲೂಕಿನಲ್ಲಿ ನಕಲಿ ವೈದ್ಯರು ಅಕ್ರಮವಾಗಿ ಕ್ಲಿನಿಕ್​ ನಡೆಸುತ್ತಿದ್ದರೆ ಇನ್ನೊಂದೆಡೆ ಮೆಡಿಕಲ್​ ಸ್ಟೋರ್​ಗಳು ಒಬ್ಬರ ಹೆಸರಿನಲ್ಲಿ ನಡೆಸುವರು ಮತ್ತೊಬ್ಬರು ವೈದ್ಯರ ಚೀಟಿ ಇಲ್ಲದೆ ಡ್ರಗ್ಸ್​ ನೀಡುತ್ತಾರೆ. ಯಾವ ಮಟ್ಟಕ್ಕೆ ಆಡಳಿತ ಕುಸಿದಿದೆ ನೀವು ಮಾಡುವ ಕೆಲಸಕ್ಕೆ ನಾನು ಕೆಟ್ಟ ಹೆಸರು ಪಡೆಯಲು ಸಾಧ್ಯವಿಲ್ಲ, ವರ್ಷಕ್ಕೆ 4 ರಾಷ್ಟ್ರೀಯ ಹಬ್ಬಗಳು ಮತ್ತು ಜಯಂತ್ರಿಗೆ ಮಾತ್ರ ಅಧಿಕಾರಿಗಳಿಂದ ಸಂಪನ್ಮೂಲ ಭರಿಸಲು ಸೂಚನೆ ನೀಡಿದ್ದೇನೆ ಹೊರತು ಬೇರೆ ಯಾವುದೇ ಹೊರೆ ನಿಮ್ಮ ಮೇಲೆ ಹಾಕಿಲ್ಲ ಎಂದರು.

ತಹಸೀಲ್ದಾರ್​ ವಿ.ಗೀತಾ, ತಾಪಂ ಆಡಳಿತಾಧಿಕಾರಿ ಟಿ.ಕೆ.ರಮೇಶ್​, ಇಒ ಡಾ.ಕೆ.ಸರ್ವೇಶ್​, ನಗರಸಭೆ ಪೌರಾಯುಕ್ತ ವಿ.ಶ್ರೀಧರ್​, ಬಿಇಒ ಕೆ.ಎನ್​.ರಾಮಚಂದ್ರಪ್ಪ ಇದ್ದರು.

ಮೂರನೇ ಕಣ್ಣು ಗಮನಿಸುತ್ತಿದೆ

ಶಾಲೆಗಳಲ್ಲಿ ಕೆಲ ಶಿಕ್ಷಕರು ಇರುವುದೇ ಇಲ್ಲ, ರಿಯಲ್​ ಎಸ್ಟೇಟ್​, ಬಡ್ಡಿ ವ್ಯವಹಾರ ಮತ್ತಿತರ ಚಟುವಟಿಕೆಗಳಲ್ಲಿ ಇರುತ್ತಾರೆ. ಬಾಲಾಜಿ ಭವನ ಹೋಟೆಲ್​ ಬಳಿ ಗುಂಪು ಸೇರಿ ಸಮೃದ್ಧಿ ಈ ತರ, ಕೊತ್ತೂರು ಆ ತರ ಎಂದು ಮಾತನಾಡಿಕೊಳ್ಳುವುದನ್ನು ನನ್ನ ಇಂಟೆಲಿಜೆನ್ಸಿ ಅವರು ಫೋನ್​ ಮೂಲಕ ನನಗೆ ಕರೆ ಮಾಡಿ ಕೇಳಿಸುತ್ತಾರೆ. ಎಲ್ಲ ಕಡೆ ನನ್ನ ಮಾಹಿತಿದಾರರು ಇರುತ್ತಾರೆ. ನೀವು ಕಣ್ಣು ಮುಚ್ಚಿಕೊಂಡು ವ್ಯವಹಾರ ಮಾಡುವುದನ್ನೆಲ್ಲಾ ನನ್ನ ಮೂರನೇ ಕಣ್ಣು ಗಮನಿಸುತ್ತದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್​ ತಿಳಿಸಿದರು.