ವಿಜಯವಾಣಿ ಸುದ್ದಿಜಾಲ ಉಡುಪಿ
ನಿತ್ಯವೂ ವಿವಿಧ ಒತ್ತಡಗಳ ನಡುವೆಯೇ ಕೆಲಸ ಮಾಡುವ ಸರ್ಕಾರಿ ನೌಕರರು, ಮನಸ್ಸಿಗೆ ತುಸು ನೆಮ್ಮದಿ ನೀಡುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಅದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದಾಗಿದೆ. ನೆಮ್ಮದಿಯಿಂದ ತಮ್ಮ ಕೆಲಸ, ಕರ್ತವ್ಯಗಳಲ್ಲಿ ತೊಡಗಿಕೊಳ್ಳಲು ಕ್ರೀಡಾ ಸ್ಫೂರ್ತಿ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಎರಡು ದಿನದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷ ಬಾಲಕೃಷ್ಣ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ನಾಗೇಶ್, ಬೈಂದೂರು ತಾಲೂಕು ಅಧ್ಯಕ್ಷ ಶೇಖರ್ ಪೂಜಾರಿ, ಕಾಪು ತಾಲೂಕು ಅಧ್ಯಕ್ಷ ಬಸವರಾಜ್, ಹೆಬ್ರಿ ತಾಲೂಕು ಅಧ್ಯಕ್ಷ ತಹಸೀಲ್ದಾರ್ ಪ್ರಸಾದ್, ಕ್ರೀಡಾ ಕಾರ್ಯದರ್ಶಿ ದಿವಾಕರ್ ನಾಯ್ಕ ಹಾಗೂ ದೀಪಾ ಉಪಸ್ಥಿತರಿದ್ದರು.
ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು ಸ್ವಾಗತಿಸಿದರು. ಕೋಶಾಧಿಕಾರಿ ದಯಾನಂದ್ ವಂದಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಎಲ್ಲ ನೌಕರರ ಪರಸ್ಪರ ಪರಿಚಯವಾಗಿ ಸ್ನೇಹ ಬೆಳೆಸಿಕೊಳ್ಳಬಹುದು. ಅದರಿಂದ ಸರ್ಕಾರಿ ನೌಕರರ ವಲಯದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬಹುದಾಗಿದೆ. | ಪ್ರತೀಕ್ ಬಾಯಲ್. ಉಡುಪಿ ಜಿಪಂ ಸಿಇಒ