ವಿಜಯಪುರ: ರಾಜ್ಯ ಸರ್ಕಾರಿ ನೌಕರರಿಗೆ 2021ನೇ ಸಾಲಿನ ಗಳಿಕೆ ರಜೆ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ ವತಿಯಿಂದ ಬುಧವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜ.1ರಿಂದ ಡಿ.31 ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿರುವ ಕ್ರಮ ಸರಿಯಲ್ಲ. ಕೋವಿಡ್ ನೆಪವೊಡ್ಡಿ 2020ನೇ ಸಾಲಿನ ಗಳಿಕೆ ರಜೆ ಮತ್ತು ತುಟ್ಟಿ ಭತ್ಯೆಯನ್ನು ನೀಡಿಲ್ಲ. ಈಗ 2021ನೇ ಸಾಲಿನಲ್ಲೂ ಸೌಲಭ್ಯವನ್ನು ರದ್ದುಗೊಳಿಸಿರುವುದು ಸೂಕ್ತ ಕ್ರಮವಲ್ಲ. ರಾಜ್ಯಾದ್ಯಂತ 2.50 ಲಕ್ಷ ಖಾಲಿ ಹುದ್ದೆಗಳ ಕೆಲಸದ ಹೊರೆಯನ್ನು ಹಾಲಿ ನೌಕರರು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಲೆಂಡೆ, ರಾಜ್ಯ ಕಾರ್ಯದರ್ಶಿ ಸುರೇಶ ಜೀಬಿ, ನೌಕರರಾದ ಅಶೋಕ, ಸಂತೋಷ ಯರಗಲ್, ಶಾಂತಗೌಡ ಅಲ್ಯಾಳ, ಕವಿತಾ ಗಾಳಿ, ವಿಜಯಲಕ್ಷ್ಮೀ ಬಿರಾದಾರ, ಶಿವರಾಜ ಹುರಕಡ್ಲಿ, ಶಾಂತಗೌಡ ಅಲ್ಯಾಳ, ಆರ್.ಕೆ.ಅಹ್ಮದ್, ಆರ್.ಎಸ್. ಮೆಣಸಗಿ ಮುಂತಾದವರು ಭಾಗವಹಿಸಿದ್ದರು.