ಅರಸೀಕೆರೆ: ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಮೂಲಕ ಬರದ ಸೀಮೆಯ ಜನರ ಜಲದಾಹ ತೀರಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂದಾಜು 570 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ದೊಡ್ಡ ಮೊತ್ತದ ಯೋಜನೆಯಿಂದ ಮೊದಲು ಕುಡಿಯುವ ನೀರು ಕೊಡಲು ತೀರ್ಮಾನ ಮಾಡಲಾಗಿದ್ದು, 570 ಕೆರೆಗಳನ್ನು ತುಂಬಿಸಲು ಉದ್ದೇಶಿಸಿದ್ದೇವೆ. ಕುಡಿಯಲು 14 ಟಿಎಂಸಿ ಹಾಗೂ ಕೆರೆ ಭರ್ತಿ ಮಾಡಲು 10 ಟಿಎಂಸಿ ಸೇರಿದಂತೆ 24 ಟಿಎಂಸಿ ನೀರಿನ ಅಗತ್ಯವಿದ್ದು, ಸಮಗ್ರ ಯೋಜನೆ ರೂಪಿಸಲಾಗಿದೆ. ಬಯಲು ಸೀಮೆಯ ಅನ್ನದಾತರ ಜಲಸಂಕಷ್ಟ ತೀರಿಸಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವ ರಾಜಕೀಯ ಟೀಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಬದಲಾಗಿ ತಲಾ ಆದಾಯ ಹೆಚ್ಚಳವಾಗಿರುವುದನ್ನು ದಾಖಲೆಗಳಿಂದ ಸಾಬೀತಾಗಿದೆ. ಅಭಿವೃದ್ಧಿ ಸಹಿಸದ ಬಿಜೆಪಿ, ಜೆಡಿಎಸ್‌ನವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಸಾಮಾಜಿಕ ಸಮಾನತೆ ತರುವ ಉದ್ದೇಶದಿಂದ ದೆಹಲಿಯಲ್ಲಿ ಒಬಿಸಿ ಸಭೆ ಮಾಡಿದ್ದೇವೆ. ದಲಿತರು, ಅಲ್ಪಸಂಖ್ಯಾತರು, ಬಡವರು, ದೀನರು, ದುರ್ಬಲರ ಹಿತ ಮನಗಂಡು ಹಲವು ಭಾಗ್ಯಗಳನ್ನು ಜಾರಿ ಮಾಡಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಲೂಟಿ ಮಾಡಿದೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಮಾಡುವ ಬದಲು ಲೂಟಿ ಹೊಡೆದಿದೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಐನೂರಕ್ಕೂ ಹೆಚ್ಚು ಭರವಸೆಗಳ ಪೈಕಿ ಶೇ.50ರಷ್ಟು ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ 13 ಸಾವಿರ ಕೋಟಿ ರೂ. ಕೊಟ್ಟು ಮೊದಲ ಹಂತದಲ್ಲಿ ನೀರು ಹರಿಸಲಾಗಿದೆ. ಜನರ ಆಶೀರ್ವಾದ ಇರುವವರೆಗೂ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಹಳ್ಳಿಗಾಡಿನ ಜನರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವಂತೆ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಕಾರ್ಯಾರಂಭ ಮಾಡಿದೆ. ಕಪ್ಪುತಲೆ ಹುಳುವಿನ ಬಾಧೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಅನುದಾನ ಕೊಟ್ಟು ಬೆಳೆಗಾರರಿಗೆ ನೆರವಿಗೆ ಧಾವಿಸಲಾಗುವುದು. ರಾಗಿಯನ್ನು ಬೆಂಬಲ ಬೆಲೆ ಮೂಲಕ ಖರೀದಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿ ಮನಗಂಡು ಲಕ್ಷ್ಮೀದೇವರಹಳ್ಳಿ ಗೇಟ್ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು 67 ಕೋಟಿ ರೂ. ವೆಚ್ಚದಲ್ಲಿ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಐಪಿ ಫೀಡರ್, ಸೋಲಾರ್ ಸ್ಟೇಷನ್, ಎತ್ತಿನಹೊಳೆ ಯೋಜನೆ, ಕೆರೆ ತುಂಬಿಸುವುದು, ಗ್ರಾಮೀಣ ರಸ್ತೆ ಅಭಿವೃದ್ಧಿ ಒಳಗೊಂಡಂತೆ ಅಂದಾಜು 570 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇವು ಅಭಿವೃದ್ಧಿಗೆ ಸಾಕ್ಷಿಯಲ್ಲವೇ ಎಂದು ರಾಜಕೀಯ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಮಾತಿನಲ್ಲೇ ತಿವಿದರು.
ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು
ಶೈಕ್ಷಣಿಕ ಕ್ಷೇತ್ರದ ಸಮಗ್ರ ಬೆಳವಣಿಗೆ ಮನಗಂಡು ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ ತೆರೆಯಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಚಿಂತನೆ ನಡೆಸಿದ್ದು ಗೀಜಿಹಳ್ಳಿ ಬಳಿ ಮತ್ತೊಂದು ವಸತಿ ಶಾಲೆ ಶೀಘ್ರದಲ್ಲೇ ಆರಂಭವಾಗಲಿದೆ. ಬರದ ಬೀಡಾಗಿದ್ದ ತಾಲೂಕಿನ ಜನರಿಗೆ ಕುಡಿಯುವ ನೀರು ಕೊಡಲೇಬೇಕು ಎನ್ನುವ ಸಂಕಲ್ಪದಿಂದ ಹೋರಾಟ ಜೆಡಿಎಸ್ ವಿರೋಧದ ನಡುವೆ ಅನುಷ್ಠಾನಕ್ಕೆ ಪ್ರಯತ್ನ ಮಾಡಿದ್ದೇನೆ. ಕೃಷ್ಣ, ಕಾವೇರಿ ಬೇಸಿನ್ ಹೆಸರಿನಲ್ಲಿ ಅನ್ಯಾಯ ಮಾಡಬಾರದು. ಎತ್ತಿನ ಹೊಳೆ ಕಾಮಗಾರಿಗೆ ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಅನುಮತಿ ಕೊಡದೆ ತಾರತಮ್ಯ ಮಾಡುತ್ತಿದೆ. ಗಂಡಸಿ, ಕಣಕಟ್ಟೆ ,ಬಾಣಾವರ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕೆರೆ ತುಂಬಿಸಲು ಅನುದಾನ ನೀಡಬೇಕು ಎಂದರು.
ಕಪ್ಪುತಲೆ ಹುಳು, ಬಿಳಿನೊಣ, ರಸ ಸೋರುವಿಕೆ ಹಾಗೂ ಅಣಬೆ ರೋಗದಿಂದ ತೆಂಗು ನಾಶವಾಗಿದೆ. ಕೀಟಬಾಧೆ ನಿವಾರಣೆಗೆ ಉಭಯ ನಾಯಕರು ನೆರವಿನ ಹಸ್ತ ಚಾಚಬೇಕು. ಬಿಜೆಪಿಯವರು ಸರ್ಕಾರ ಬೀಳುತ್ತದೆ ಎನ್ನುವ ಸುಳ್ಳು ಹೇಳುತ್ತಿದ್ದಾರೆ. ಹಣಕಾಸಿನ ಸ್ಥಿತಿಗತಿ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಲು ಸಿದ್ಧನಿದ್ದೇನೆ, ತಾಕತ್ತಿದ್ದರೆ ಅಖಾಡಕ್ಕೆ ಬನ್ನಿ ಎಂದು ವೇದಿಕೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಸವಾಲು ಹಾಕಿದರು. ತರೀಕೆರೆ ಶಾಸಕ ಶ್ರೀನಿವಾಸ್ ಇದ್ದರು.