ಬೆಂಗಳೂರು: ಪಿಂಚಣಿ ಮಂಜೂರು ಮಾಡದ ಸರ್ಕಾರದ ಕ್ರಮವನ್ನು ಖಂಡಿಸಿ, ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ಕೋರಲು ನಿರ್ಧರಿಸಲಾಗಿದೆ ಎಂದು ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಮಂಜೂರಾತಿಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾವನದಲ್ಲಿ ಪ್ರತಿಭಟನೆಗೆ ನಡೆಸಲಾಗುವುದು, ಸರ್ಕಾರ ಸಮಸ್ಯೆಗೆ ಸ್ಪಂದಿಸದಿದ್ದರೆ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ದಯಾಮರಣಕ್ಕೆ ಪತ್ರ ಬರೆಯಲಾಗುವುದು ಎಂದರು.
ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿವಂಚಿತ ನೌಕರರ ಸಂಘ, ಕೃಪಾ ಸಂಘಟನೆ ಹಾಗೂ ಕಾನೂನು ಹೋರಾಟ ಸಮಿತಿಯಿಂದ ಕಳೆದ 25 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದ್ದು, ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ದೂರಿದರು.
ವಿಧಾನಸಭಾ ಚುನಾವಣೆಯ ಸಂದರ್ಭ ಪ್ರಣಾಳಿಕೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯ ಜಾರಿಗೆ ತರುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದನಂತರ ಮರೆತು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿವಂಚಿತ ನೌಕರರ ಸಂದ ಅಧ್ಯಕ್ಷ ಜಿ.ಹನುಮಂತಪ್ಪ ವಾತನಾಡಿ, ನಿವೃತ್ತಿ ಹೊಂದಿರುವ ಶಿಕ್ಷಕರಿಗೆ, ನಿಧನ ಹೊಂದಿರುವ ನೌಕರರ ಕುಟುಂಬಗಳಿಗೆ ಪಿಂಚಣಿ ಮಂಜೂರು ಮಾಡಬೇಕು. ಆ ಮೂಲಕ ನಮ್ಮ ಸಂಧ್ಯಾ ಕಾಲದ ಬದುಕನ್ನು ನೆಮ್ಮದಿಯಿಂದ ಕಳೆಯಲು ಅನುವು ವಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ನಿರ್ಧಾರವು ತೀವ್ರವಾಗಿರುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂದ ಗೌರವಾಧ್ಯಕ್ಷ ಎಚ್.ನಾಗರಾಜಪ್ಪ ಮತ್ತಿತರರಿದ್ದರು.