ಜಿಲ್ಲೆ

ರಂಗಭೂಮಿ ಕಲೆ ಉಳಿಸಲು ಸರ್ಕಾರದ ಸಹಕಾರ ಅಗತ್ಯ : ಡಾ. ಕೆ.ಎಸ್.ಕರೀಗೌಡ

ಮೈಸೂರು: ಸರ್ಕಾರ ನಶಿಸಿ ಹೋಗುತ್ತಿರುವ ರಂಗಭೂಮಿ ಕಲೆಯನ್ನು ಬೆಳೆಸುವುದರೊಂದಿಗೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಬೇಕು ಎಂದು ಉದ್ಯಮಿ ಡಾ. ಕೆ.ಎಸ್.ಕರೀಗೌಡ ಒತ್ತಾಯಿಸಿದರು.

ತಾಲೂಕಿನ ಹಳೆಕಾಮನಕೊಪ್ಪಲಿನಲ್ಲಿ ಭಕ್ತ ಕನಕದಾಸ ನಾಟಕ ಮಂಡಳಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ನಾಟಕಗಳನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಮೊಬೈಲ್ ಬಳಕೆ ಹೆಚ್ಚಾದ ನಂತರನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಟಕ ಪ್ರದರ್ಶನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲೆಯನ್ನೇ ನಂಬಿರುವ ಕಲಾವಿದರು ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ರಂಗಭೂಮಿ ಕಲಾವಿದರಿಗೆ ಸರ್ಕಾರ ಮನೆ, ನಿವೇಶನ, ಮಾಶಾಸನ ಕೊಡುವ ಮುಖಾಂತರ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್‌ಕುಮಾರ್, ಗ್ರಾಮಸ್ಥರಾದ ರವಿಕುಮಾರ್, ವೈ.ಸಿ. ಸ್ವಾಮಿ, ಮೆಹಬೂಬ್ ಪಾಷಾ, ಶಿವಲಿಂಗೇಗೌಡ, ಕರಕನಹಳ್ಳಿ ಮಂಜು, ನಂಜುಂಡಸ್ವಾಮಿ, ಗಾಂಧಿಕುಮಾರ್, ದಳಪತಿ ಮಹಾದೇವ್, ರಮೇಶ್ ಹಾಗೂ ಇತರರು ಇದ್ದರು.