ಬೆಂಗಳೂರು : ಸರ್ಕಾರಿ ಹುದ್ದೆಗಳಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ನೌಕರರಿಗೆ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಶುಕ್ರವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ "ರಾಜ್ಯ ಮಟ್ಟದ ಕಾರ್ಯಗಾರ ಹಾಗೂ ಬೃಹತ್ ಸಮಾವೇಶ'ದಲ್ಲಿ ಮಾತನಾಡಿದರು. ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳಲ್ಲಿ ಕೆಲ ಹಣಕಾಸಿನ ವಿಷಯಗಳಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸರ್ಕಾರಿ ನೌಕರರಂತೆ ನಿವೃತ್ತ ನೌಕರರಿಗೂ ಆರೋಗ್ಯ ವಿಮಾ ಸೌಲಭ್ಯ, ಕುಟುಂಬ ವರ್ಗದವರಿಗೆ ಸರ್ಕಾರಿ ಬಸ್ಗಳಲ್ಲಿ ಶೇ. 25-50 ರಿಯಾಯಿತಿ ಸೇರಿ ಇತರೆ ಬೇಡಿಕೆಗಳು ನ್ಯಾಯಯುತವಾಗಿದ್ದು, ಇದು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಅಧ್ಯಕ್ಷ ಎಲ್. ಭೈರಪ್ಪ ಮಾತನಾಡಿ, ಸರ್ಕಾರವು 7ನೇ ವೇತನ ಆಯೋಗರಚಿಸಿ ನಿವೃತ್ತ ನೌಕರರ ಪಿಂಚಣಿಯನ್ನೂ ಪರಿಷ್ಕರಿಸಿರುವುದು ಅಭಿನಂದನೀಯ. ಆದರೆ,2022ರ ಜು.1ರಿಂದ 2024ರ ಜು.31ರವರೆಗಿನ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಬರಬೇಕಾದ ಹೆಚ್ಚುವರಿ ಪಿಂಚಣಿ, ರಜೆ ನಗದೀಕರಣ, ಕಮ್ಯೂಟೇಷನ್ ಸಂಬಂಧಪಟ್ಟ ಆರ್ಥಿಕ ಸೌಲಭ್ಯಗಳನ್ನು ನೀಡಿಲ್ಲ ಎಂದರು.
70 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಮೂಲ ಪಿಂಚಣಿಯಲ್ಲಿ ಶೇ.10 ಹೆಚ್ಚಳ ಮಾಡಬೇಕು. ಛತ್ತೀಸ್ಢ, ಪಂಜಾಬ್ ಸೇರಿ ದೇಶದ ಅನೇಕ ರಾಜ್ಯಗಳು ಈ ಸೌಲಭ್ಯ ನೀಡಲಾಗಿದೆ. ಕರ್ನಾಟಕದಲ್ಲೂ ಇದನ್ನು ಜಾರಿ ಮಾಡಿದರೆ ವೃದ್ದಾಪ್ಯದಲ್ಲಿರುವ ನಿವೃತ್ತರಿಗೆ ಅನುಕೂಲವಾಗಲಿದೆ. ಸರ್ಕಾರಿ ನಿವೃತ್ತ ನೌಕರರ ಸಂಗಳಿಗೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡಬೇಕು. ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಭೈರಪ್ಪ ಒತ್ತಾಯಿಸಿದರು.
ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ಡಾ.ಟಿ.ಎಚ್. ಆಂಜನಪ್ಪ,ಲ್ಯಾಪೊಸ್ಕೋಪಿ ಶಸಚಿಕಿತ್ಸಾ ತಜ್ಞೆ ಡಾ.ಪುಣ್ಯವತಿ ಸಿ.ನಾಗರಾಜ್ ನಿವೃತ್ತಿ ವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆ ಕುರಿತು ಮಾತನಾಡಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಶಾಸಕ ಡಾ. ಎಚ್.ಡಿ. ರಂಗನಾಥ್, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಮತ್ತಿತರರಿದ್ದರು.