ಜಿಲ್ಲೆ

ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧ

ಪ್ರಸಿನ್ ಕೆ.ಆರ್

ಎಚ್.ಡಿ.ಕೋಟೆ: ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಾಗಾಗಿ ಈ ವರ್ಷದ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಅನಿಲ್ ಕುಮಾರ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಭಾರತೀಯ ಕ್ರಾಂತಿಕಾರಿ ಕಿಶನ್ ಸೇನೆ ಆಯೋಜಿಸಿದ್ದ 45ನೇ ವರ್ಷದ ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಕೂಡ ಕೃಷಿ ಕುಟುಂಬ ನಮ್ಮ ತಂದೆಯವರು ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದರು. ನಾನು ಕೂಡ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ರೈತರಿಗೆ ಪೂರಕವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ಕೋಟೆ ಸರಗೂರು ಭಾಗದಲ್ಲಿ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಮುಳ್ಳೂರು ಪಡುಕೋಟೆ ಚೆಕ್ಕೋಡ್ನಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಉಪ ಘಟಕಗಳನ್ನು ತೆರೆಯಲು ಈಗಾಗಲೇ ಕಾರ್ಯನ್ಮುಕರಾಗಿದ್ದೇವೆ, ಮುಂದುವರೆದು ತಾಲೂಕಿನಲ್ಲಿ 220 ವಿದ್ಯುತ್ ಘಟಕ ಸ್ಥಾವರ ಸ್ಥಾಪಿಸಲು 80 ಎಕರೆ ಜಮೀನಿನ ಅವಶ್ಯಕತೆಯಿದ್ದು, ಜಮೀನಿನನ್ನು ಹುಡುಕಿ ವಿದ್ಯುತ್ ಘಟಕ ತೆರೆಯಲು ಮುಂದಾಗುತ್ತೇವೆ ಇದರಿಂದ 90 ಭಾಗದಷ್ಟು ವಿದ್ಯುತ್ ಕೊರತೆಯನ್ನು ನೀಗಿಸಬಹುದು ಎಂದು ಹೇಳಿದರು, ಹಾಗೆ ಕೃಷಿ ಸಚಿವರ ಜತೆ ಮಾತನಾಡಿ ಮುಂದಿನ ವರ್ಷದಿಂದ ರೈತರ ದಿನ ಮತ್ತು ರೈತರ ಹುತಾತ್ಮ ದಿನವನ್ನು ಸರ್ಕಾರದಿಂದಲೇ ಮಾಡುವ ಕುರಿತು ಚರ್ಚಿಸುತ್ತೇನೆ ಎಂದರು

ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕುನೂರ್ ಮಾತನಾಡಿ ರೈತರಲ್ಲಿ ಒಗ್ಗಟ್ಟಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳಿಗೆ ತಡೆ ತಂದಿದ್ದು, ಹಾಗೂ ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಉಳಿಸಿದ್ದು ರೈತ ಸಂಘಟನೆಗಳ ಹೋರಾಟದ ಫಲವಾಗಿದೆ ಎಂದರು.

ರೈತರು ಬದುಕು ಕಟ್ಟಿಕೊಳ್ಳಬೇಕು ರೈತರಿಗೆ ಅನ್ಯಾಯವಾದಾಗ ಸಂಘಟಿತರಾಗಿ ಹೋರಾಟ ಮಾಡಬೇಕು ರೈತರ ಮತ್ತು ಕಾರ್ಯಕರ್ತರ ಬಲವೇ ಸಂಘಟನೆ ಎಂದು ಹೇಳಿದರು.

ರೈತರ ಹುತಾತ್ಮ ದಿನಾಚರಣೆ ಹಿನ್ನೆಲೆ ಬೈಕ್ ಟ್ರಾೃಕ್ಟರ್ ಮೂಲಕ ಗದ್ದಿಗೆ ಸರ್ಕಲ್ ನಿಂದ ಹ್ಯಾಂಡ್ ಪೋಸ್ಟ್ ವರೆಗೆ ರ‌್ಯಾಲಿ ನಡೆಸಲಾಯಿತು.

ಗದ್ದಿಗೆ ಸರ್ಕಲ್ ಬಳಿ ಭಾರತೀಯ ಕ್ರಾಂತಿಕಾರಿ ಕಿಶನ್ ಸೇನೆವತಿಯಿಂದ ರೈತರ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ, ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.

ಮಾಜಿ ಸಚಿವ ಕೋಟೆ ಎಂ ಶಿವಣ್ಣ, ತಾಲೂಕು ಅಧ್ಯಕ್ಷ ಮಹದೇವ, ರಾಜ್ಯ ಯುವ ಘಟಕದ ಅಧ್ಯಕ್ಷ ರಫಿಉಲ್ಲಾ, ಜಿಲ್ಲಾಧ್ಯಕ್ಷ ಗಂಗಾಧರ್, ತಂಜಿಂ, ಶಶಿಕುಮಾರ್, ಗೋವಿಂದ್ ರಾಜ್, ಯಶೋದಾ, ಈವನ್‌ರಾಜ್, ತಸ್ಲೀಮ್, ವೆಂಕಟಯ್ಯ ಇತರರು ಇದ್ದರು.