ಸುಳ್ಯ: ಸಾರ್ವಜನಿಕರ ಬಹು ಮುಖ್ಯ ಬೇಡಿಕೆಯಾದ ಸುಳ್ಯ ಅಡ್ಕಾರು, ಪೇರಾಲು ಮಾರ್ಗವಾಗಿ ಅಡಂಗಾಯಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಕೊನೆಗೂ ಸಿಕ್ಕಿದೆ.
ಅಜ್ಜಾವರ ಗ್ರಾಮದ ಗ್ರಾಮಸ್ಥರು ಹಲವು ವರ್ಷಗಳಿಂದ ಸುಳ್ಯ ಅಡ್ಕಾರು, ಪೇರಾಲು ಮಾರ್ಗವಾಗಿ ಅಡ್ಪಂಗಾಯಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಪ್ರಯತ್ನಿಸುತ್ತಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ನೇತೃತ್ವದಲ್ಲಿ ಅಧಿಕಾರಿಗಳಿಗೆ ತಿಳಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ನಡೆದ ಗ್ರಾಮಮಟ್ಟದ ವಿಲೇವಾರಿ ಸಭೆಯಲ್ಲಿ ಈ ಬೇಡಿಕೆ ಪ್ರತಿಧ್ವನಿಸಿತ್ತು. ಪರಿಣಾಮವಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಎ.ಬಿ.ಯವರ ನೇತೃತ್ವದಲ್ಲಿ ತರುವಲ್ಲಿ ಯಶಸ್ವಿಯಾಗಿದ್ದು, ಈ ಮಾರ್ಗದಲ್ಲಿ ಬಸ್ಸು ಸಂಚಾರ ಆರಂಭಗೊಂಡಿದೆ.
ಶನಿವಾರ ಬಸ್ಸು ಈ ಮಾರ್ಗವಾಗಿ ಸಂಚರಿಸಿದಾಗ ಅಡ್ಪಂಗಾಯದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಬಸ್ಸನ್ನು ಸ್ವಾಗತಿಸಲಾಯಿತು.