ಜಿಲ್ಲೆ

ತಗ್ಗಿನಲ್ಲಿ ಸಿಕ್ಕಿಹಾಕಿಕೊಂಡ ಸರ್ಕಾರಿ ಬಸ್ !

ಶಹಾಬಾದ್: ಸರ್ಕಾರಿ ಬಸ್‌ವೊಂದು ರಸ್ತೆ ತಗ್ಗಿನಲ್ಲಿ ಸಿಕ್ಕಿಹಾಕಿಕೊಂಡ ಪ್ರಸಂಗ ಗುರುವಾರ ತೊನಸನಹಳ್ಳಿ(ಎಸ್) ಬಳಿ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜನಪ್ರತಿನಿಧಿಗಳು ಹಾಗೂ ಜನರ ಒತ್ತಡದಿಂದ ಚಿತ್ತಾಪುರ ಡಿಪೋದಿಂದ ಶಹಾಬಾದ್ ಮಾರ್ಗವಾಗಿ ಜೇವರ್ಗಿಗೆ ಬಸ್ ಸಂಚಾರ ಮರು ಆರಂಭಿಸಲಾಗಿತ್ತು. ಬೆಳಗ್ಗೆ ಚಿತ್ತಾಪುರದಿಂದ ಬಸ್ ಜೇವರ್ಗಿಗೆ ಹೋಗಿದೆ. ಮಧ್ಯಾಹ್ನ ಚಿತ್ತಾಪುರಕ್ಕೆ ಬರುತ್ತಿದ್ದಾಗ ತೊನಸನಹಳ್ಳಿ ಬಳಿ ತಗ್ಗಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದ ಒಂದು ಕ್ಷಣ ಬಸ್ ಅಲುಗಾಡಿದ್ದು, ಪ್ರಯಾಣಿಕರು ಕಿರುಚಾಡಿದ್ದಾರೆ.

ಶಹಾಬಾದ್-ತೊನಸನಹಳ್ಳಿ ರಸ್ತೆಯಲ್ಲಿ ಮುರುಮ್ ಹಾಕಿ ಸ್ವಲ್ಪ ಸರಿಪಡಿಸಲಾಗಿದೆ. ಆದರೆ ತೊನಸನಹಳ್ಳಿಯಿಂದ ಜೇವರ್ಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ದೊಡ್ಡ ದೊಡ್ಡ ತಗ್ಗುಗಳು ಬಿದ್ದಿವೆ. ಕನಿಷ್ಠ ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ. ಬಸ್‌ನ ಹಿಂದಿನ ಚಕ್ರ ತಗ್ಗಿನಲ್ಲಿ ಸಿಕ್ಕಿಹಾಕಿಕೊಂಡು ನಿಂತಲ್ಲೇ ತಿರುಗುತ್ತಿತ್ತು. ಇದರಿಂದ ಬಸ್‌ನ ಹಿಂಬಾಗ ಮತ್ತು ಮುಂಭಾಗ ಭಾರಿ ಪ್ರಮಾಣದಲ್ಲಿ ಜಖಂಗೊAಡಿದೆ. ಪ್ರಯಾಣಿಕರನ್ನು ಕೆಳಗಿಳಿಸಿ ಸುಮಾರು ಎರಡು ಗಂಟೆ ಪ್ರಯಾಸದ ನಂತರ ಬಸ್ ಅನ್ನು ಹೊಂಡದಿAದ ಹೊರತೆಗೆಯಲಾಯಿತು.