ಬೈಪಾನ್ ರಸ್ತೆಯ ಸರ್ವಜ್ಞ ವೃತ್ತದ ಪಕ್ಕದಲ್ಲಿ ಪಾಳು ಬಿದ್ದ ಸರ್ಕಾರಿ ಕಟ್ಟಡಗಳು 
ಜಿಲ್ಲೆ

ಭೂತ ಬಂಗಲೆಯಾದ ಸರ್ಕಾರಿ ಕಟ್ಟಡ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಸ್ವಚ್ಛತೆ ಪಾಠ ಹೇಳುವ ಸರ್ಕಾರಿ ಕಟ್ಟಡಗಳೇ ಪಾಳುಬಿದ್ದು ಇದೀಗ ಅನಾಥವಾಗಿದೆ. ತಾಪಂ ಹಾಗೂ ಗ್ರಾಪಂವೊಂದರ ಕೂಗಳತೆಯಲ್ಲಿ ಹಳೆಯ ಕಟ್ಟಡವೊಂದು ಪಾಳುಬಿದ್ದು ಇದೀಗ ಶುಚಿತ್ವಕ್ಕೂ ಸವಾಲೊಡ್ಡುತ್ತಿದೆ.

ಕಾರ್ಕಳ ತಾಪಂ ಹಾಗೂ ಕುಕ್ಕುಂದೂರು ಗ್ರಾಪಂ ಕಚೇರಿಗಳ ಕೆಲವೇ ಅಂತರದಲ್ಲಿ ಬೈಪಾಸ್ ರಸ್ತೆಯ ಸರ್ವಜ್ಞ ವೃತ್ತದ ಪಕ್ಕದಲ್ಲಿ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಪಂ ವ್ಯಾಪ್ತಿಯ ಗಡಿಭಾಗದಲ್ಲಿ ಈ ಪಾಳುಬಿದ್ದ ಕಟ್ಟಡವಿದ್ದು, ಇಡಿ ಪ್ರದೇಶವೇ ಹುಲ್ಲು ಪೊದೆಗಳಿಂದ ಆವರಿಸಿದೆ. ಈ ಕಟ್ಟಡವೂ ಪಾಳುಬಿದ್ದು ಹಲವು ವರ್ಷ ಕಳೆದರೂ ಕಟ್ಟಡ ನಿರ್ವಹಣೆಯ ಕಡೆ ಅಧಿಕಾರಿಗಳು ಮನಸ್ಸು ಮಾಡದ ಪರಿಣಾಮ ಹಳೇ ಕಟ್ಟಡಗಳು ಇದೀಗ ಅನಾಥವಾಗಿದೆ.

ಬಿಡಿಒ ಕಚೇರಿಯಾಗಿತ್ತು

ತಾಪಂ ಆಗುವ ಮೊದಲು ಬ್ಲಾಕ್ ಡೆವೆಲಪ್‌ಮೆಂಟ್ ಆಫಿಸರ್ (ಬಿಡಿಒ) ಕಚೇರಿ ಈ ಕಟ್ಟಡದಲ್ಲಿತ್ತು. ಬಿಡಿಒ ಕಚೇರಿ ಜತೆಗೆ ವಸತಿಗೃಹ, ದಾಸ್ತಾನು ಕೊಠಡಿ, ವಾಹನ ಶೆಡ್ ಇತ್ಯಾದಿ ಕಟ್ಟಡಗಳು ಇದರ ಅಕ್ಕಪಕ್ಕದಲ್ಲಿತ್ತು. ತಾಪಂ ಇಲಾಖೆಯಾದ ಬಳಿಕ ತುಸು ಸಮಯ ಇಲ್ಲಿ ಕಾರ್ಯಾಚರಿಸಿತ್ತು. ಬಳಿಕ ಬೈಪಾಸ್ ರಸ್ತೆ ಬದಿಗೆ ಸ್ಥಳಾಂತರಗೊಂಡು ಸುಸಜ್ಜಿತ ತಾಪಂ ಕಟ್ಟಡ ನೂತನವಾಗಿ ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ.

ಗೋಡೆಗಳು ಧರಾಶಾಯಿ

ಅರ್ಧ ಎಕರೆ ಜಾಗದಲ್ಲಿರುವ ಈ 70 ವರ್ಷ ಹಳೆಯ ಕಟ್ಟಡಗಳಲ್ಲಿ ಹೆಚ್ಚಿನವು ನೆಲಕಚ್ಚಿವೆ. ಗೋಡೆಗಳು ಜರಿದುಬಿದ್ದಿವೆ. ಹೆಂಚುಗಳು ಎಲ್ಲವೂ ಬಿದ್ದು ಧರಾಶಾಯಿಯಾಗಿದೆ, ಪೊದೆಗಳು ಆವರಿಸಿವೆ ಕಟ್ಟಡಗಳು ಎಲ್ಲಿತ್ತು ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಪರಿಸರ ಸ್ವಚ್ಛತೆಯ ಕೊರತೆ ಎದುರಿಸುತ್ತಿದೆ.

ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ

ಬೈಪಾಸ್ ರಸ್ತೆಯ ಪಕ್ಕದಲ್ಲೇ ಇರುವ ಈ ಜಾಗಕ್ಕೆ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಮೌಲ್ಯವಿದ್ದರೂ ಇದೀಗ ಸರ್ಕಾರಿ ಕಚೇರಿ ಅನಾಥವಾದ ಪರಿಣಾಮ ಜಾಗಕ್ಕೂ ಬೆಲೆ ಇಲ್ಲದಂತಾಗಿದೆ. ಈ ಜಾಗದ ಒಂದು ಭಾಗದಲ್ಲಿ ವನ್ಯಜೀವಿ ವಿಭಾಗದ ಕಚೇರಿ ವರ್ಷದ ಹಿಂದೆ ನಿರ್ಮಾಣಗೊಂಡಿದೆ. ಉಳಿದ ಸ್ಥಳ ಖಾಲಿಯಿದೆ. ಸರ್ಕಾರಿ ಕಟ್ಟಡಗಳಿಗೆ, ವಿವಿಧ ಯೋಜನೆಗಳಿಗೆ ಕಟ್ಟಡ ನಿರ್ಮಾಣ ಮಾಡಲು ಜಾಗವಿಲ್ಲ ಎನ್ನುವುದು ಆಡಳಿತ ಪ್ರತಿ ಬಾರಿ ಸಬೂಬು ಹೇಳುತ್ತದೆ. ಆದರೆ ಇದರ ಸದುಪಯೋಗಕ್ಕೆ ಮನಸ್ಸು ಮಾಡಿಲ್ಲ. ಮುಂದಿನ ದಿನಗಳಲ್ಲಿ ಯಾವುದಾದರೊಂದು ಸರ್ಕಾರಿ ಕಚೇರಿ ನಿರ್ಮಾಣಕ್ಕಾದರೂ ಈ ಜಾಗ ಉಪಯೋಗ ಆಗುವ ಮೂಲಕ ಪಾಳುಬಿದ್ದ ಜಾಗಕ್ಕೆ ಮೌಲ್ಯ ದೊರಕುವಂತಾಗಬೇಕು.

ಮಹತ್ವಾಕಾಂಕ್ಷಿ ಯೋಜನೆ ಮೊಟಕು

ಸರ್ಕಾರಿ ಜಾಗವೊಂದು ಖಾಲಿ ಬಿದ್ದು ಅನಾಥವಾಗಿ ಹೋಗುವುದನ್ನು ಕಂಡು ಅಂದಿನ ಅಧಿಕಾರಿ ರಾಜೇಂದ್ರ ಬೇಕಲ್ ಅವರು ಈ ಜಾಗದಲ್ಲಿ ವಾಣಿಜ್ಯ ಉಪಯೋಗಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಆ ಬಳಿಕ ಅವರು ಅದೇ ವೇಳೆಗೆ ವರ್ಗಾವಣೆಗೊಂಡ ಪರಿಣಾಮ ಮಹತ್ವಾಕಾಂಕ್ಷಿ ಯೋಜನೆ ಮೊಟಕುಗೊಂಡಿತ್ತು. ಆ ಬಳಿಕ ಬಂದ ಆಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಕಟ್ಟಡಗಳು ಧರಾಶಾಯಿಯಾಗಿ ಪಾಳುಬಿದ್ದು ಹುಲ್ಲು ಪೊದೆಗಳಿಂದ ಆವೃತ್ತಗೊಂಡಿದೆ.

ಈ ಜಾಗ ಕುಕ್ಕುಂದೂರು ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಮುಂದೆ ಆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಅವಕಾಶ ಕಲ್ಪಿಸಲಾಗುವುದು. ಜಾಗವನ್ನು ಪರಿಶೀಲಿಸಿ, ಸರ್ವೇ ನಡೆಸಿ ತಂತಿ ಬೇಲಿ ನಿರ್ಮಿಸಿ ಸಂರಕ್ಷಿಸಿಡುವ ಕೆಲಸ ಮಾಡುತ್ತೇವೆ. -ಕೃಷ್ಣಾನಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾಪಂ ಕಾರ್ಕಳ