ಕೊಳ್ಳೇಗಾಲ: ಶಿವನಸಮುದ್ರದಲ್ಲಿ ಹಮ್ಮಿಕೊಂಡಿರುವ ಭರಚುಕ್ಕಿ ಜಲಪಾತೋತ್ಸವ ಈ ಭಾಗದ ಪ್ರವಾಸ್ಯೋದ್ಯಮದ ಸಮಗ್ರ ಅಭಿವೃದ್ಧಿಗೆ ವೇದಿಕೆ ಯಾಗಲಿದೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವನಸಮುದ್ರ ಐತಿಹಾಸಿಕ ತಾಣವಾಗಿದೆ. ಶ್ರೀ ಚಕ್ರ ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಲಯ, ಶ್ರೀ ಮಧ್ಯ ರಂಗನಾಥ ದೇವಾಲಯ, ಆದಿಶಕ್ತಿ ಶಿಂಷಾ ಮಾರಮ್ಮ, ದರ್ಗಾ, ಭರಚುಕ್ಕಿ ಜಲಪಾತವಿದೆ. ಇವುಗಳು ಈ ಸ್ಥಳದ ಮೆರಗನ್ನು ಹೆಚ್ಚಿಸಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಲಪಾತೋತ್ಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಆಗಮಿಸಲಿದ್ದಾರೆ. ಈ ಭಾಗದ ಪ್ರವಾಸೋದ್ಯಮಕ್ಕೆ ಏನಾದರೂ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡರೆ ಹಿಂದುಳಿದ ಜಿಲ್ಲೆ ಎಂಬ ಕಳಂಕ ದೂರವಾಗಲಿದೆ ಎಂದರು.
ಜಲಪಾತೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜನರು ಕಾರ್ಯಕ್ರಮಕ್ಕೆ ಬರಲು ವ್ಯವಸ್ಥಿತವಾಗಿ ಕ್ರಮವಹಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಕಲಾವಿದರು ಸಂಗೀತ ರಸದೌತಣ ನೀಡಲಿದ್ದಾರೆ. ಸಾರ್ವಜನಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಮಂಜುಳಾ, ಡಿವೈಎಸ್ಪಿ ಧಮೇರ್ಂದ್ರ ಇತರರಿದ್ದರು.