ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ 19 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿರುವುದನ್ನು ಖಂಡಿಸಿ ಸೋಮವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಅಭಯ ಪಾಟೀಲ, ನಿಖಿಲ ಕತ್ತಿ, ಅನಿಲ ಬೆನಕೆ, ಉಜ್ವಲಾ ಬಡವನಾಚೆ, ಸಿದ್ದನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಶಂಕರ ಗೆಜ್ಜಿ

ಬೆಳಗಾವಿ: ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 19 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟಿಸಿದರು.

ನಗರದ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರಿಗೆ ಪೂರಕವಾಗಿದ್ದ ಬಹುತೇಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ. ಆ ಮೂಲಕ ಕೃಷಿಕರಿಗೆ ಈ ಸರ್ಕಾರ ದೊಡ್ಡ ಮಟ್ಟದ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ದೇಶದ ಬೆನ್ನೆಲುಬು ಎಂದು ಹಲವು ಪಕ್ಷಗಳು ಮಾತನಾಡುತ್ತ ಬಂದಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನುಕೂಲ ಕಲ್ಪಿಸಲು ಕಿಸಾನ್ ಸನ್ಮಾನ್ ಯೋಜನೆ ಜಾರಿಗೊಳಿಸಿದರು. ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ಹಣವನ್ನು ರೈತರ ಖಾತೆಗೆ ಹಾಕುತ್ತಿತ್ತು. ಕೇಂದ್ರದ 6 ಸಾವಿರ ಜತೆಗೆ ಬಿಎಸ್‌ವೈ ಸಿಎಂ ಆಗಿದ್ದಾಗ 4 ಸಾವಿರ ರೂ. ಹೆಚ್ಚುವರಿ ಹಣ ಘೋಷಿಸಿದರು. ಬಿಜೆಪಿ ಘೋಷಿಸಿದ್ದ 4 ಸಾವಿರ ರೂ. ಹಣವನ್ನು ಈ ಸರ್ಕಾರ ತಡೆ ಹಿಡಿದಿದೆ. ಸರ್ಕಾರದ ನಿರ್ಧಾರದಿಂದ ರೈತರು ಅನ್ಯಾಯಕ್ಕೆ ಒಳಗಾಗಿದೆ ಎಂದು ಹರಿಹಾಯ್ದರು. ಗ್ಯಾರಂಟಿ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ. ಬಡವರಿಗೆ ಈ ಎಲ್ಲವೂ ತಲುಪಲಿ. ಬಿಜೆಪಿ ಅವಧಿಯ ಯೋಜನೆಗಳನ್ನು ಮರಳಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ನಿಖಿಲ ಕತ್ತಿ, ಮಾಜಿ ಶಾಸಕ ಅನಿಲ ಬೆನಕೆ ಹಾಗೂ ಉಜ್ವಲಾ ಬಡವನಾಚೆ, ಸಿದ್ದನಗೌಡ ಪಾಟೀಲ, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು, ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ಬೆಳಗಾವಿ ಮಹಾನಗರ ಮತ್ತು ಜಿಲ್ಲಾ ಗ್ರಾಮೀಣ ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳೂ ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು ಮುಂದುವರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.