ಜಿಲ್ಲೆ

ಸಂವಿಧಾನ ಆಶಯದಂತೆ ಸರ್ಕಾರದ ನಡೆ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ ಸಂವಿಧಾನ ಆಶಯದಂತೆ ಕೆಲಸ ಮಾಡುತ್ತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.


ಪಟ್ಟಣದ ನ್ಯಾಷನಲ್ ಮಿಡ್ಲಿ ಶಾಲೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಡವರು, ಮಹಿಳೆಯರ ಸಬಲೀಕರಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಭಾಗ್ಯಗಳನ್ನು ನೀಡಿದ ರಾಮಯ್ಯ ಎದೇ ಹೆಸರಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದರು.


ಸ್ವಾತಂತ್ರ್ಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾತ್ಮರನ್ನು ಸ್ಮರಿಸಬೇಕು. ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹಲವೆಡೆ ಅಸಮಾನತೆ, ದೌರ್ಜನ್ಯ, ಮಹಿಳೆಯರ ಮೇಲಿನ ದಬ್ವಾಳಿಕೆ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.


ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ, ವಿಕಸಿತ ಭಾರತದ ನಿರ್ಮಾಣಕ್ಕೆ ನಿರ್ವಂಚನೆಯಿಂದ ಕೆಲಸ ಮಾಡೋಣ. ಯುವ ಜನರ ಆಶೋತ್ತರವನ್ನು ನಮ್ಮ ಸರ್ಕಾರ ಈಡೇರಿಸುತ್ತದೆ ಎಂದರು.


ಮುಖ್ಯಭಾಷಣಕಾರ ಶಿಕ್ಷಕ ದೊರೆಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ನಂತರ ಮುಂದೇನು ಎಂಬ ಪ್ರಶ್ನೆ ಎದ್ದಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಉತ್ತರವಾಯಿತು. ದೇಶವು ನಮಗೇನು ಕೊಟ್ಟಿದೆ ಎಂಬುದಲ್ಲ. ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ತಿಳಿದು ನಡೆಯಬೇಕು. ಇಂದಿನ ದಿನಗಳಲ್ಲಿ ದೇಶ ಪ್ರೇಮ ಕಡಿಮೆಯಾಗುತ್ತಿದೆ. ದೇಶ ಮರೆತರೆ ಇದ್ದು ಸತ್ತ ಹಾಗೆ. ಸರ್ವ ಸಂಸ್ಕೃತಿ, ಧರ್ಮ, ಜಾತಿಯನ್ನು ಗೌರವಿಸುವ ಮನಸ್ಥಿತಿಯನ್ನು ಮಕ್ಕಳ ಮನಸ್ಸಿನಲ್ಲಿ ನಾಟಿಸಬೇಕು ಎಂದರು.


ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಪೊಲೀಸ್ ಠಾಣೆಯ ಪಿಎಸ್ ಬಿ.ವಿ.ವರ್ಷಾ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಹಸೀಲ್ದಾರ್ ಮಂಜುಳಾ, ನಗರಸಭೆ ಆಯುಕ್ತ ಎ.ರಮೇಶ್, ಡಿವೈಎಸ್ಪಿ ಎಂ.ಧರ್ಮೇಂದ್ರ, ತಾಪಂ ಪ್ರಭಾರ ಇಒ ಶಿವ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥ್, ನಗರಸಭೆ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.