ಮಸ್ಕಿ: ತಾಲೂಕಿನ ತೋರಣದಿನ್ನಿ ಗ್ರಾಪಂನಲ್ಲಿ ನರೇಗಾ ಯೋಜನೆ ಮತ್ತು 15ನೇ ಸಾಲಿನ ಕ್ರಿಯಾ ಯೋಜನೆ ಹಣ ದುರ್ಬಳಕೆ ಮಾಡಿದ ಪಿಡಿಒ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರು ಪಟ್ಟಣದ ತಾಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಇದನ್ನೂ ಓದಿ: ನರೇಗಾ ಯೋಜನೆ ಕಾಮಗಾರಿ ಪರಿಶೀಲನೆ
ಏಪ್ರಿಲ್ 2020 ರಿಂದ ಜುಲೈ 2021ರವರೆಗೆ ತೋರಣದಿನ್ನಿಯಲ್ಲಿ ನರೇಗಾ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳಾದ ಶಾಲಾ ಭೋಜನಾಲಯ, ತೋರಣದಿನ್ನಿ ಕ್ರಾಸ್ ಶಾಲೆ ಕಾಂಪೌಂಡ್ ನಿರ್ಮಾಣ, ಸ್ಥಾನಿಕ ವೀಕ್ಷಣೆ ಗುಣಮಟ್ಟ ದಾಖಲೆಗಳ ಪರಿಶೀಲನೆ ಮತ್ತು 15ನೇ ಹಣಕಾಸಿನ ಅನುದಾನ ಅಡಿಯಲ್ಲಿ ಬಿಲ್ ಪಾವತಿಸಿದ ವೋಚರ್‌ಗಳನ್ನು ಕ್ರಿಯಾಯೋಜನೆ ಮತ್ತು ಸರ್ಕಾರದ ಮಾರ್ಗಸೂಚಿ ಮಾನದಂಡ ನಿಯಮಾನುಸಾರ ಸಂಪೂರ್ಣ ತನಿಖೆ ಮಾಡಲು 2023ರ ಸಾಮಾನ್ಯ ಸಭೆಯ ನಡವಳಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
2023-24 ಉದ್ಯೋಗ ಖಾತ್ರಿ ಕ್ರಿಯಾಯೋಜನೆಯನ್ನು ಪಿಡಿಒ ಅನುಮೋದನೆಗೆ ಕಳಿಸಿಲ್ಲ. ಅಲ್ಲದೆ, ನರೇಗಾ ಯೋಜನೆಯನ್ನು ಕಾನೂನು ಬಾಹಿರವಾಗಿ ರದ್ದುಪಡಿಸಿರುತ್ತಾರೆ. ಗ್ರಾಮ ಸಭೆ, ಗ್ರಾಪಂ ಸದಸ್ಯರ ಸಾಮಾನ್ಯ ಸಭೆ ಇಲ್ಲದೇ ಹಣ ಪಡೆದುಕೊಂಡು ಹೊಸ ಕ್ರಿಯಾ ಯೋಜನೆಯನ್ನು ತಯಾರಿಸಿದ್ದಾರೆ. ಕೆಲ ಜಾಬ್‌ಕಾರ್ಡ್‌ದಾರರು ಕೆಲಸಕ್ಕೆ ಬಾರದಿದ್ದರೂ ಹಣ ಪಾವತಿಸಿದ್ದಾರೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಬೋಗಸ್ ಬಿಲ್ ಮಾಡಿದ ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯರಾದ ಚಂದಮ್ಮ ಜೋಸೆಫ್, ಯಲ್ಲಮ್ಮ, ಬಸವಲಿಂಗಮ್ಮ, ಮಲ್ಲಮ್ಮ, ಪ್ರಮುಖರಾದ ಬಸವಂತ ಹಿರೇಕಡಬೂರು, ಮಹಮ್ಮದ್ ಶೇಡ್ಮಿ, ಜೋಸೆಫ್ ತೋರಣದಿನ್ನಿ, ಭೀಮಣ್ಣ, ಕರಿಯಪ್ಪ, ಅಮರೇಶ ಹೂಗಾರ ಇತರರಿದ್ದರು.