ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಡಾ.ವಿ.ಆರ್.ಗೌರಿಶಂಕರ್‌ಗೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಅನುಗ್ರಹಿಸಿ ಅಭಿನಂದನಾ ಪತ್ರ ನೀಡಿದರು. ಪಿ.ಎ.ಮುರಳಿ.ಕೃಷ್ಣಮೂರ್ತಿ, ಶಮಂತ ಶರ್ಮ ಇದ್ದರು. 
ಜಿಲ್ಲೆ

ನಿವೃತ್ತಿ ನಂತರವೂ ಶ್ರೀ ಪೀಠದ ಹಿರಿಯ ಸಲಹೆಗಾರರಾಗಿ ಗೌರಿಶಂಕರ್ ಸೇವೆ

ಶೃಂಗೇರಿ: ಸುದೀರ್ಘವಾಗಿ ಸೇವೆ ಸಲ್ಲಿಸಿದ ಶ್ರೀಮಠದ ಆಡಳಿತಾಧಿಕಾರಿ ಗೌರಿ ಶಂಕರ್ ವಯೋಸಹಜವಾಗಿ ನಿವೃತ್ತಿ ಹೊಂದುತ್ತಿದ್ದು, ನಿವೃತ್ತಿ ನಂತರವೂ ಪೀಠದ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀಮಠದ ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಸೇವೆಯಿಂದ ನಿರ್ಗಮಿತರಾದ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರಿಶಂಕರ್ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಹಿರಿಯ ಜಗದ್ಗುರುಗಳ ಅಪ್ಪಣೆಯಂತೆ ಆಡಳಿತಾಧಿಕಾರಿಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಧರ್ಮ ಪ್ರಚಾರದಲ್ಲಿ ನಿರತವಾಗಿರುವ ಶ್ರೀಮಠವನ್ನು ಮುನ್ನೆಡಸಲು ಎಲ್ಲರ ಸಹಕಾರ ಅಗತ್ಯ. ಧರ್ಮ ಪ್ರಚಾರ ನಡೆಸುವ ಸಂಸ್ಥೆಗಳಿಗೆ ಅನೇಕ ಕಷ್ಟಗಳಿರುತ್ತದೆ.ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿರುವ ಪರಂಪರೆ ಉಳಿಸಿಕೊಂಡು, ಲೌಕಿಕ ಜಗತ್ತಿಗೆ ತಕ್ಕಂತೆ ಸಮನ್ವಯತೆ ಕಾಪಾಡುವುದು ಮುಖ್ಯ. ಧಾರ್ಮಿಕ ಸಂಸ್ಥೆಗೆ ಉತ್ಕೃಷ್ಟ ಸ್ಥಾನವಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವುದು ಒಂದು ದೊಡ್ಡ ಸವಾಲಾಗಿದೆ. ಲೌಕಿಕವಾಗಿ ಕಂಪನಿಗಳನ್ನು ನಡೆಸಿದಂತೆ ಧಾರ್ಮಿಕ ಸಂಸ್ಥೆ ನಡೆಸಲು ಸಾಧ್ಯವಾಗದು. ಇದಕ್ಕೆ ಪ್ರತ್ಯೇಕವಾದ ನಿಯಮವಿದೆ ಎಂದರು.
ಶ್ರೀಶಾರದಾ ಪೀಠಕ್ಕೆ ವಿಶಿಷ್ಠವಾದ ಸಂಪ್ರದಾಯವಿದೆ. ಶ್ರೀಮಠದ ಕಾರ್ಯ ವ್ಯಾಪ್ತಿ ಈಗ ದೊಡ್ಡದಾಗಿದೆ. ನಮ್ಮ ಗುರುಗಳು ಕಲ್ಪವೃಕ್ಷದಂತೆ. ಗೌರಿಶಂಕರ್ ಅವರಿಗೆ ವಯೋಸಹಜವಾಗಿ ಸಂಚಾರ ಕಷ್ಟವಾಗುತ್ತಿದೆ. ಧರ್ಮ ಪ್ರಚಾರದಲ್ಲಿ ನಿರಂತರ ಸೇವೆ ನೀಡಿದ ಅವರು ತಮ್ಮ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿಗೆ ಯಾವುದೇ ಗೊಂದಲ, ಅಪಪ್ರಚಾರಕ್ಕೆ ಆಸ್ಪದವಿಲ್ಲ. ಅವರ ಸೇವೆ ಮತ್ತು ಅನುಭವ ಇನ್ನೂ ಮುಂದೆಯೂ ಇರುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಡಾ.ವಿ.ಆರ್.ಗೌರಿಶಂಕರ್ ಮಾತನಾಡಿ, ಜಗದ್ಗುರುಗಳು ಹಾಗೂ ದೇವಿ ಕೃಪೆಯಿಂದ ಶ್ರೀ ಮಠದಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರಕಿದೆ. ಜಗದ್ಗುರುಗಳ ಆಶೀರ್ವಾದದಿಂದ ಶ್ರೀಮಠದಲ್ಲಿ ಸಾಕಷ್ಟು ಹೊಸ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದು, ಜಗದ್ಗುರುಗಳ ಕೃಪೆಯಿಂದ ಶ್ರೀಮಠ ಸಾಕಷ್ಟು ಅಭಿವೃದ್ಧಿ ಕಂಡಿದೆ. ದೊಡ್ಡ ಸಂಸ್ಥೆಯನ್ನು ನಿರಂತರವಾಗಿ ಮುನ್ನೆಡಸಲು ನನಗೆ ಕಷ್ಟ ಎಂದು ಅರಿತು ಜಗದ್ಗುರುಗಳ ಬಳಿ ನಿವೇದನೆ ಮಾಡಿಕೊಂಡಿದ್ದೆ. ಶ್ರೀಮಠಕ್ಕೆ ನನ್ನ ಸಹಕಾರ ನಿರಂತರವಾಗಿರಲಿದೆ ಎಂದರು.
ಶ್ರೀ ಮಠದಲ್ಲಿ 38 ವರ್ಷ ಸೇವೆ ಸಲ್ಲಿಸಿದ ಡಾ.ವಿ.ಆರ್.ಗೌರಿಶಂಕರ್ ದಂಪತಿಗಳನ್ನು ಶ್ರೀ ಮಠದಿಂದ ಚಿನ್ನದ ಸರ,ಉಂಗುರ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.ಶ್ರೀ ಮಠದ ಆಡಳಿತಾಧಿಕಾರಿ ಪಿ.ಎ.ಮುರುಳಿ, ಜಗದ್ಗುರುಗಳ ಆಪ್ತ ಸಹಾಯಕರಾದ ಕೃಷ್ಣಮೂರ್ತಿ ಭಟ್, ಶಮಂತ ಶರ್ಮ, ಶ್ರೀಮಠದ ವಿವಿಧ ಶಾಖೆಗಳ ಧರ್ಮಾಧಿಕಾರಿಗಳು ಉಪಸ್ಥಿತರಿದ್ದರು.