ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಆಯೋಜಿಸಿದ್ದ ಗೊಸ್ಪೆಲ್​ ಗಾಲಾ (ಸುವಾರ್ತೆಯ ಸಂಭ್ರಮ) ಕಾರ್ಯಕ್ರಮವನ್ನು ವಲೇರಿಯನ್​ ಮೆಂಡೊನ್ಸಾ ಉದ್ಘಾಟಿಸಿದರು. ಡೆನಿಸ್​ ಡೆಸಾ, ಗೊಡ್ವಿನ್​ ಮಸ್ಕರೇನ್ಹಸ್​, ಸಿಸ್ಟರ್​ ಸುಷ್ಮಾ ಇತರರಿದ್ದರು. 
ಜಿಲ್ಲೆ

ಉತ್ತಮ ನಾಯಕನಾದವ ಸಮಾಜದಲ್ಲಿ ಬದಲಾವಣೆ ತರಬಲ್ಲ

ಫಾ.ವಲೇರಿಯನ್​ ಮೆಂಡೊನ್ಸಾ ಅಭಿಮತ | ಸುವಾರ್ತೆಯ ಸಂಭ್ರಮ ಉದ್ಘಾಟನೆ

ಉಡುಪಿ: ಪ್ರೀತಿ ಮತ್ತು ಕ್ಷಮಾ ಗುಣಗಳಿರುವ ಉತ್ತಮ ನಾಯಕನಾದವನು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿಯ ಮೂಲಕ ವಿಶ್ವದಲ್ಲಿ ಕ್ರಾಂತಿಕಾರಕ ಬದಲಾವಣೆ ತೋರಿಸಿರುವುದು ಮಾದರಿಯಾಗಿದೆ ಎಂದು ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಲೇರಿಯನ್​ ಮೆಂಡೊನ್ಸಾ ಹೇಳಿದರು.

ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಭಾರತೀಯ ಕೆಥೊಲಿಕ್​ ಯುವ ಸಂಚಾಲನ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಗೊಸ್ಪೆಲ್​ ಗಾಲಾ (ಸುವಾರ್ತೆಯ ಸಂಭ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೇಸು ಸ್ವಾಮಿ ತೋರಿಸಿಕೊಟ್ಟ ಮೌಲ್ಯಗಳೊಂದಿಗೆ ಬದುಕಿದಾಗ ಸಮಾಜದ ಪ್ರತಿಯೊಬ್ಬರಿಗೂ ಮಾದರಿ ನಾಯಕನಾಗಲು ಸಾಧ್ಯವಿದೆ ಎಂದರು.

ಪ್ರಾರ್ಥನೆಯ ವರ್ಷ ಘೋಷಣೆ

ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಡೆನಿಸ್​ ಡೆಸಾ ಮಾತನಾಡಿ, 2025ನೇ ವರ್ಷವು ಯೇಸು ಸ್ವಾಮಿಯ ಜನ್ಮದ ಜುಬಿಲಿ ಆಚರಣೆಯಿದೆ. ಅದಕ್ಕೆ ಪೂರಕವಾಗಿ ಈ ವರ್ಷವನ್ನು ಪ್ರಾರ್ಥನೆಯ ವರ್ಷವಾಗಿ ಘೋಷಿಸಲಾಗಿದೆ. ಯುವ ಜನರು ಹೇಗೆ ಆಟೋಟ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅದೇ ರೀತಿ ಆಧ್ಯಾತ್ಮಿಕ ವಿಚಾರಗಳಿಗೂ ಆಸಕ್ತಿ ತೋರಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತೊಟ್ಟಂ ಐಸಿವೈಎಂ ಅಧ್ಯಕ್ಷ ಸ್ಯಾಮುವೆಲ್​ ಫೆರ್ನಾಂಡಿಸ್​ ಸ್ವಾಗತಿಸಿದರು. ಪ್ರಿಯಾಂಕಾ ಮಾರ್ಟಿಸ್​ ವಂದಿಸಿದರು

ಯುವಜನರೊಂದಿಗೆ ಆಧ್ಯಾತ್ಮಿಕ ಸಂವಾದ

ಕಲ್ಯಾಣಪುರ ವಲಯದ 9 ಚರ್ಚ್​ಗಳ 175ಕ್ಕೂ ಅಧಿಕ ಯುವಜನರು ಪಾಲ್ಗೊಂಡಿದ್ದು, ಅವರ ಪರಿಚಯವನ್ನು ವಿಶಿಷ್ಟವಾಗಿ ಮಾಡಲಾಯಿತು. ಬಳಿಕ ಅವರೊಂದಿಗೆ ಆಧ್ಯಾತ್ಮಿಕ ಸಂವಾದ ಮತ್ತು ಸಂಭಾಷಣೆ, ಬೈಬಲ್​ ಕ್ವಿಜ್​, ಬೈಬಲ್​ ರೀಲ್ಸ್​ ಸ್ಪರ್ಧೆ, ಕೊಲಾಜ್​ ಮಾಡುವುದು ಹಾಗೂ ಆಧ್ಯಾತ್ಮಿಕ ಗಾಯನ ಕಾರ್ಯಕ್ರಮ ನಡೆದವು. ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟ್​ನ ಮುಖ್ಯಸ್ಥೆ ಸಿಸ್ಟರ್​ ಸುಷ್ಮಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಗೊಡ್ವಿನ್​ ಮಸ್ಕರೇನ್ಹಸ್​, ವಲಯ ಅಧ್ಯಕ್ಷರಾದ ಲೊಯ್ಡ್​ ಕರ್ನೆಲಿಯೊ, ತೊಟ್ಟಂ ಚರ್ಚ್​ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್​ ಫೆರ್ನಾಂಡಿಸ್​, ಐಸಿವೈಎಂ ಸಚೇತಕರಾದ ಲೆಸ್ಲಿ ಆರೋಝಾ, ಆಲಿಸ್​ ಮಿನೇಜಸ್​ ಉಪಸ್ಥಿತರಿದ್ದರು.