ಸಿಂಧನೂರಿನ ಕುಷ್ಟಗಿ ಮಾರ್ಗದಲ್ಲಿದ್ದ ಬಿಡಾಡಿ ದನಗಳನ್ನು ನಗರಸಭೆ ಸಿಬ್ಬಂದಿ ಗೋಶಾಲೆಗೆ ಕರೆದೊಯ್ಯುತ್ತಿರುವುದು.  
ಜಿಲ್ಲೆ

ಪೌರಾಯುಕ್ತರ ರಾತ್ರೋರಾತ್ರಿ ಕಾರ್ಯಾಚರಣೆ, ಗೋಶಾಲೆ ಸೇರಿದ ಬಿಡಾಡಿ ದನಗಳು

ಸಿಂಧನೂರು: ಹಲವು ವರ್ಷಗಳಿಂದ ನಗರದ ಹೆದ್ದಾರಿಯಲ್ಲಿ ಸಂಚಾರಕ್ಕೆ ಕಂಠಕವಾಗಿದ್ದ ಬಿಡಾಡಿ ದನಗಳನ್ನು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸಿಬ್ಬಂದಿಯೊಂದಿಗೆ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೋಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕುಷ್ಟಗಿ ಮಾರ್ಗ, ರಾಯಚೂರು ರಸ್ತೆಯಲ್ಲಿ ಮೊಕ್ಕಾಂ ಹೂಡಿ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದವು. ಸಂಚಾರ ಪೊಲೀಸರು ಆರು ತಿಂಗಳಿಂದ ನಿತ್ಯ ಬಿಡಾಡಿ ದನಗಳನ್ನು ರಸ್ತೆಯಿಂದ ಓಡಿಸಲು ಹರಸಾಹಸ ಪಟ್ಟು ವಿಫಲರಾಗಿದ್ದರು. ಕೊನೆಗೆ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಈ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರಸಭೆ ಮಾದರಿ ಡೈರಿ ಉಪ ಕಾನೂನನ್ನು ಅಳವಡಿಸಿಕೊಂಡಿದ್ದು, ಈ ಪ್ರಯುಕ್ತ ಸಿಂಧನೂರು-ರಾಯಚೂರು ರಸ್ತೆ, ಕುಷ್ಟಗಿ ಮಾರ್ಗ, ಗಂಗವಾತಿ ರಸ್ತೆ ಮತ್ತು ಅಕ್ಕ ಪಕ್ಕದಲ್ಲಿದ್ದ ಬಿಡಾಡಿ ದನಗಳನ್ನು ಸೆರೆ ಹಿಡಿದು ಗೋಶಾಲೆಗೆ ಕಳಿಸುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿತು.

ಈಗಾಗಲೇ 10ಕ್ಕೂ ಅಧಿಕ ಬಿಡಾಡಿ ದನಗಳನ್ನು ಸೆರೆ ಹಿಡಿದು ಗೋಶಾಲೆಗೆ ಕಳಿಸಿದ್ದು, ಮಾದರಿ ಡೈರಿ ಉಪ ಕಾನೂನಿನ ಪ್ರಕಾರ ಸಾರ್ವಜನಿಕರು ತಮ್ಮ ಸಾಕು ದನ, ಕರು, ಎಮ್ಮೆ, ಎತ್ತು, ಕುರಿ, ಮೇಕೆ, ಕತ್ತೆಗಳನ್ನು ರಸ್ತೆಗೆ ಬಿಟ್ಟಲ್ಲಿ ಅದರ ಮಾಲಿಕರಿಗೆ 25,000 ರೂ. ದಂಡ ಹಾಗೂ ಪುರಸಭೆ ಕಾಯ್ದೆ ಅನುಸಾರ ಸದರಿ ಮಾಲೀಕರ ವಿರುದ್ಧ ಪೊಲೀಸ್ ಕೆಸ್ ದಾಖಲಿಸಲಾಗುವುದು.

ಯಾವುದೇ ವ್ಯಕ್ತಿ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಬೇಕೆಂದಲ್ಲಿ ಉಪಕಾನೂನಿನಡಿ ನಗರಸಭೆಯ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಪೌರಾಯುಕ್ತರು ಮನವಿ ಮಾಡಿದರು. ಆರೋಗ್ಯ ಶಾಖೆಯ ನಿರೀಕ್ಷಕ ಮಹೇಶ, ಲಕ್ಷ್ಮೀಪತಿ, ಮೆಸ್ತ್ರಿ ಅಮರೇಶ, ವೆಂಕೋಬ, ಪೌರ ಕಾರ್ಮಿಕರು ಇದ್ದರು.