ನಿರಂತರ ಫೌಂಡೇಷನ್ ವತಿಯಿಂದ ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಹಾಗೂ ಇತರ ಕಥೆಗಳನ್ನು ಆಧರಿಸಿದ ‘ಗೊರೂರು’ ನಾಟಕ ಪ್ರದರ್ಶನವನ್ನು ಸೆ.9ರಂದು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ನಿರಂತರ ಫೌಂಡೇಷನ್ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಆಯ್ದ ಬರಹಗಳನ್ನು ಆಧರಿಸಿದ ಹೊಸ ನಾಟಕವನ್ನು ರಂಗಕ್ಕೆ ಅಳವಡಿಸಿದೆ. ಇಡೀ ನಾಟಕ ಗೊರೂರಿನ ಮೋಡಿ ಮಾಡುವ ಜಗತ್ತು ಪರಿಚಯಿಸುತ್ತಲೇ ವೈವಿಧ್ಯಮಯ ಪಾತ್ರಗಳು, ಅವರ ವಿಶಿಷ್ಟತೆಗಳು, ಅನುಭವಗಳು, ಅಲ್ಲಿನ ಸಾಮಾನ್ಯರ ದಿನಚರಿಗಳು ಮತ್ತು ಸುತ್ತಲಿನ ವಾತಾವರಣವನ್ನು ಪ್ರಸ್ತುತಪಡಿಸುತ್ತಲೇ ಹಲವು ಸೂಕ್ಷ್ಮವಿವರಗಳನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ.
ತಮ್ಮ ದೈನಂದಿನ ಜೀವನದಲ್ಲಿ ವಿಚಿತ್ರವಾದ ಸನ್ನಿವೇಶಗಳನ್ನು ಎದುರಿಸುತ್ತಿದ್ದರೂ, ಗೊರೂರಿನ ನಿವಾಸಿಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಲೇ ಒಟ್ಟಾಗಿ ತಮ್ಮ ಸವಾಲುಗಳನ್ನು ಪರಿಹರಿಸುತ್ತಾರೆ. ಈ ನಾಟಕ ಖ್ಯಾತ ರಂಗಕರ್ಮಿ ಮಂಜುನಾಥ್ ಎಲ್.ಬಡಿಗೇರ್ ಅವರ ನಿರ್ದೇಶನದಲ್ಲಿ ರೂಪುಗೊಂಡಿದ್ದು, ದಿಗ್ವಿಜಯ್ (ನೀನಾಸಂ) ಅವರು ಸಂಗೀತ ಸಹಕಾರ ನೀಡಿದ್ದಾರೆ.