ಜಿಲ್ಲೆ

ಜಾನಪದ ವಿವಿ ಸ್ಥಾಪನೆಗೆ ಗೊರುಚ ಕೊಡುಗೆ ಅಪಾರ

ಶಿಗ್ಗಾಂವಿ: ಜನಪದ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಜನಪದರ ಬದುಕಿನೊಂದಿಗೆ ಜಾನಪದವು ಬೆಳೆದು ಬಂದಿದೆ. ಅದು ಹಾಡು, ಲಾವಣಿ, ಕಥೆ, ಗಾದೆ, ಮಜಲುಗಳ ಮೂಲಕ ಪ್ರಸಾರವಾಗುವಂತಹದ್ದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೂಣಿ ಹೇಳಿದರು.
ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ) ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗೊರುಚ ಜನ್ಮದಿನದ ನಿಮಿತ್ತ ಗುರುವಾರ ಏರ್ಪಡಿಸಿದ್ದ ಗೊರುಚ ಬದುಕು- ಬರಹ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರ ವಿಚಾರಗಳೇ ಜನಪದರ ಆಶಯಗಳಾಗಿವೆ. ಗೊರುಚರವರು ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಅಧ್ಯಯನ ಮತ್ತು ಸಂಶೋಧನೆ ಮಾಡಿದವರು. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಅವರ ಕೊಡುಗೆ ಅಪಾರವಾಗಿದೆ. ಇಂತಹ ಮೇರು ವ್ಯಕ್ತಿತ್ವದ ಹಿರಿಯ ಜೀವಿಯ ಕುರಿತು ಅವರ ಬದುಕು- ಬರಹದ ಕುರಿತು ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಪ್ರಸ್ತುತವಾಗಿದೆ ಎಂದರು.
ಗೊ.ರು. ಚನ್ನಬಸಪ್ಪ ಅವರು ಮಾತನಾಡಿ, ನನಗೂ ಜಾನಪದ ವಿಶ್ವವಿದ್ಯಾಲಯಕ್ಕೂ ಭಾವನಾತ್ಮಕ, ಅವಿನಾಭಾವ ಸಂಬಂಧವಿದೆ. ಜಾನಪದ ವಿವಿಗೆ ತನ್ನದೆ ಆದ ಪರಂಪರೆ ಇದೆ. ಆದರೆ, ವಿಶ್ವಕ್ಕೆ ಪ್ರಥಮ ವಿಶ್ವವಿದ್ಯಾಲಯ ಎನ್ನುವುದು ಕೇವಲ ಮಾತಿಗಾಗಿ ಆಗಿದೆ. ಇದರ ಬೆಳವಣಿಗೆಗೆ ಸರ್ಕಾರಗಳು ವಿಶೇಷ ಆಸಕ್ತಿ ವಹಿಸದೇ ಇರುವುದು ಬೇಸರ ತಂದಿದೆ ಎಂದರು.
ವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಸಿ. ವೀರಣ್ಣ, ವಿವಿ ನಿಕಟಪೂರ್ವ ಕುಲಪತಿ ಪ್ರೊ. ಡಿ.ಬಿ. ನಾಯಕ, ಹಾನಗಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಮಾರುತಿ ಶಿಡ್ಲಾಪುರ ಅವರು ಜನಪದ ಸಾಹಿತ್ಯಕ್ಕೆ ಗೊರುಚ ಅವರ ಕೊಡುಗೆ ಕುರಿತು ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ. ಸಾಲಿ, ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ, ಸಹಾಯಕ ಕುಲಸಚಿವ ಶಹಜಾನ್ ಮುದಕವಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಶೈಲ ಹುದ್ದಾರ, ಡಾ. ಶಂಕರ ಕುಂದಗೋಳ, ಶರೀಫ ಮಾಕಪ್ಪನವರ, ಸುಭಾಸ ಹೊಸಮನಿ, ಎಸ್.ಸಿ. ಕಲ್ಲನಗೌಡರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶಸಾಪ ಪದಾಧಿಕಾರಿಗಳು, ಕದಳಿ ವೇದಿಕೆ ಸದಸ್ಯರು, ವಿವಿ ಸಿಬ್ಬಂದಿ, ವಿದ್ಯಾರ್ಥಿ ಗಳು ಇದ್ದರು.