ಗೊರೇಬಾಳ: ಅಂತರಾತ್ಮದಲ್ಲಿ ನೆಲೆಸಿರುವ ಪರಮಾತ್ಮನ ಧ್ಯಾನವೇ ಭಕ್ತರ ಆದ್ಯ ಕರ್ತವ್ಯವಾಗಬೇಕು. ಯಾವುದೇ ಕಾಯಕ ಮಾಡಿದರೂ ನಿಷ್ಠೆಯಿಂದ ದೇವರಿಗೆ ಅರ್ಪಿಸಿದರೆ ಬದುಕು ಸಾರ್ಥಕವಾಗಿತ್ತದೆ. ಪುರಾಣ ಪ್ರವಚನಗಳ ಅಧ್ಯಾತ್ಮ ಸಾರ ಅರಿತು ನಡೆದರೆ ಜೀವನದ ಪಾಠ ಕಲಿತಂತೆ ಎಂದು ಮಸ್ಕಿ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗಣೇಶ ಗಾಯತ್ರಿ ಮಾತೆ ರಥೋತ್ಸವದ ನಿಮಿತ್ತ ಬಂಗಾರಿ ಕ್ಯಾಂಪಿನ ಅನ್ನಪೂರ್ಣೇಶ್ವರಿ ಜನ ಸೇವಾ ಕಲ್ಯಾಣ ಟ್ರಸ್ಟ್ ಹಾಗೂ ಶ್ರೀ ಸಿದ್ಧಾಶ್ರಮದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 11ನೇ ವರ್ಷದ ಜೀವನ ದರ್ಶನ ಪ್ರವಚನ ಮತ್ತು ಸಿದ್ದರಾಮೇಶ್ವರ ಶರಣರು ರಚಿಸಿದ ತತ್ವಪದಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣಯ್ಯ ಸ್ವಾಮಿ ಹಿರೇಮಠ ಸೋಮನಾಳ ಹಾಗೂ ರೌಡಕುಂದ ಯರ‌್ರಿಸ್ವಾಮಿ ತಾತ ತತ್ವಪದ ಹಾಡಿದರು. ಚಿದಾನಂದಪ್ಪ ಗವಾಯಿ ಗೊರೇಬಾಳ ಹಾರ್ಮೋನಿಯಂ, ಕ್ರಾಂತಿವೀರಯ್ಯ ಸ್ವಾಮಿ ಸಿಂಧನೂರ ದಿಲ್ ರುಬಾ, ಶಿವರಾಜ ಕವಿತಾಳ ತಬಲಾ ನುಡಿಸಿದರು.
ಬಂಗಾರಿ ಕ್ಯಾಂಪ್ ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು, ರೌಡಕುಂದ ಹಿರೇಮಠದ ಶಿವಯೋಗಿ ಶಿವಾಚಾರ್ಯ, ಪ್ರಭುದೇವ ತಾತ, ಜಾಲಿಹಾಳ ಹಿರೇಮಠದ ಗುರುಬಸಯ್ಯಸ್ವಾಮಿ, ಹೆಬ್ಬಾಳ ರೇಣುಕಾಶ್ರಮದ ಶಾಂತಯ್ಯ ತಾತ ಇತರರಿದ್ದರು.