ಗೊರೇಬಾಳ: ಜನತಾ ಕರ್ಫ್ಯೂ ಜಾರಿಯಿಂದ ಕಾರ್ಮಿಕರ ಬದುಕು ಅತಂತ್ರವಾಗಿದ್ದು, ಅವರ ಕುಟುಂಬಗಳಿಗೆ ಆಹಾರ, ಲಸಿಕೆ, ಹಣಕಾಸಿನ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕಾರ್ಮಿಕ ಸಂಘಟನೆ ಗ್ರಾಮ ಘಟಕದ ಅದ್ಯಕ್ಷ ಬಿ.ಶ್ರೀನಿವಾಸ ಒತ್ತಾಯಿಸಿದ್ದಾರೆ. ಶಾಂತಿನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ಎರಡು ವರ್ಷದಿಂದ ಕರೋನಾ ಜನರ ಜೀವ ಹಿಂಡುತ್ತಿದೆ. ಕಾರ್ಮಿಕರು ಸೇರಿ ಎಲ್ಲರೂ ಲಸಿಕೆ ಹಾಕಿಸಿಕೊಂಡು, ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದರು. ಉಪಾದ್ಯಕ್ಷ ರಂಗಪ್ಪ ತಳಗೇರಿ ಮಾತನಾಡಿ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ಗಂಗಪ್ಪ, ಸದಸ್ಯರಾದ ಕುಮಾರ, ಅಂಬರೀಷ, ಶಿವರಾಜ, ಶಿವಪ್ಪ ಹೊಳಗೇರಿ ಇತರರು ಇದ್ದರು.