ಕುಮಟಾ: ತಾಲೂಕಿನ ಪುಣ್ಯಕ್ಷೇತ್ರ ಗೋರೆ ದೇವಸ್ಥಾನದ ಸುತ್ತಲಿನ ಸುಂದರ ಪ್ರಾಕೃತಿಕ ಪರಿಸರವನ್ನು ಅಪಾಯಕಾರಿ ಘನತ್ಯಾಜ್ಯ ಎಸೆಯುವ ಮೂಲಕ ಹಾಲುಮಾಡಲಾಗುತ್ತಿದೆ. ಕೂಡಲೇ ಈ ಭಾಗದಲ್ಲಿ ಘನ ತ್ಯಾಜ್ಯ-ಕಸ ಎಸೆಯುವುದನ್ನು ಸಂಬಂಧಪಟ್ಟವರು ನಿಲ್ಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ ಪಟಗಾರ ಆಗ್ರಹಿಸಿದ್ದಾರೆ.
ಗೋರೆ ಗುಡ್ಡದ ಮೇಲೆ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಕಸ, ಘನತ್ಯಾಜ್ಯ ಎಸೆಯುವುದು ಹೆಚ್ಚಿದೆ. ಗೋರೆ ಗುಡ್ಡದ ಸನಿಹದ ರಾಷ್ಟ್ರೀಯ ಹೆದ್ದಾರಿ ಮೇಲಿನ ವಾಹನ ಶೋರೂಮ್ಳ ಸಹಿತ ವಿವಿಧ ಉದ್ಯಮಗಳ ವ್ಯರ್ಥ ತ್ಯಾಜ್ಯವೇ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದು ಕಂಡುಬರುತ್ತದೆ.
ಮಾನವರಿಗೆ ಮಾತ್ರವಲ್ಲದೇ ಮೇಯಲು ಬರುವ ದನಕರುಗಳಿಗೆ ಮತ್ತು ಕಾಡುಪ್ರಾಣಿಗಳಿಗೂ ಅಪಾಯಕಾರಿಯಾದ ವಾಹನಗಳ ಗಾಜುಗಳನ್ನು ದೊಡ್ಡ ಪ್ರಮಾಣದಲ್ಲಿ ರಾಶಿ ಹಾಕಲಾಗಿದೆ. ಮದ್ಯದ ಬಾಟಲಿಗಳಂತೂ ಹೆಜ್ಜೆಹೆಜ್ಜೆಗೂ ಬಿದ್ದಿದ್ದು ಪರಿಸರ ಸಂಪೂರ್ಣ ಮಾಲಿನಗೊಳ್ಳುತ್ತಿದೆ.
ಸ್ಥಳೀಯ ಆಡಳಿತ ಹಾಗೂ ತಾಲೂಕಾಡಳಿತ ಇದನ್ನೊಂದು ಅಪರಾಧ ಪ್ರಕರಣವೆಂದು ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಗೋರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ, ಇಲ್ಲಿನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳದಿದ್ದಲ್ಲಿ ಪೊಲೀಸ್ ದೂರು ದಾಖಲಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.