ಮಡಿಕೇರಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆಂಬ ಸುದ್ದಿ ಹರಿದಾಡಲಾರಂಭಿಸಿದೆ. ಪ್ರಸ್ತುತ ವಸತಿ ಸಚಿವ ವಿ. ಸೋಮಣ್ಣ ಮೈಸೂರು ಜಿಲ್ಲೆಯೊಂದಿಗೆ ಹೆಚ್ಚುವರಿಯಾಗಿ ಕೊಡಗಿನ ಉಸ್ತುವಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಅರ್ಹ 10 ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ಹಂಚಬೇಕಾಗಿದೆ. ಖಾತೆ ಹಂಚಿಕೆ ಬಳಿಕ ಉಸ್ತುವಾರಿ ಹಂಚಿಕೆ ಜವಾಬ್ದಾರಿ ಸಿಎಂ ಹೆಗಲಿಗೇರಿದೆ. ದೂರದ ಮತ್ತು ಪುಟ್ಟ ಜಿಲ್ಲೆ ಕೊಡಗಿನ ಉಸ್ತುವಾರಿ ಜವಾಬ್ದಾರಿ ನಿರ್ವಹಿಸುವ ಆಸಕ್ತಿ ಸಾಮಾನ್ಯವಾಗಿ ಯಾವ ಸಚಿವರೂ ತೋರುವುದಿಲ್ಲ. ಯಾರನ್ನು ಕಳುಹಿಸಲಾಗು ತ್ತದೆ ಎಂಬ ಕುತೂಹಲ ಮೂಡಿದೆ.
ಹೆಚ್ಚುವರಿ ಉಸ್ತುವಾರಿ ಸಚಿವರಾಗಿರುವುದರಿಂದ ಸ್ವಾತಂತ್ರೊೃೀತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯದಲ್ಲಿ ವಿ. ಸೋಮಣ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಚಿವರ ಜವಾಬ್ದಾರಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ವಹಿಸಿದರು. ಸರ್ಕಾರದ ಸಂದೇಶವನ್ನು ಸಚಿವರ ಬದಲು ಡಿಸಿ ನೀಡಿದರು.
ಅರ್ಹ ಶಾಸಕರ ಪೈಕಿ ಗೋಪಾಲಯ್ಯ ಬಗ್ಗೆ ಬಿಜೆಪಿ ಮುಖಂಡರು ಒಲವು ಹೊಂದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಅಡಗೂರು ಎಚ್.ವಿಶ್ವನಾಥ್ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡಲ್ಲಿ ಮೈಸೂರು ಅಥವಾ ಕೊಡಗು ಉಸ್ತುವಾರಿ ಆಗಲಿದ್ದಾರೆ. ಆ ಕಾಲಘಟ್ಟದಲ್ಲಿ ಮತ್ತೆ ಬದಲಾವಣೆ ಆಗಲಿದೆ.
ಸುರೇಶ್‌ಕುಮಾರ್ ಒಲವು
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಕೊಡಗಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಲು ಮಾನಸಿಕವಾಗಿ ಸಜ್ಜಾಗಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಮರುದಿನವೇ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರನ್ನು ಭೇಟಿ ಮಾಡಲು ಆಗಮಿಸಿದ್ದರು. ಈ ವೇಳೆ ಸಚಿವ ಸ್ಥಾನ ವಂಚಿತ ಆಡಳಿತಾರೂಢ ಶಾಸಕರು ಸಚಿವರ ಕಾರ್ಯಕ್ರಮ ಬಹಿಷ್ಕರಿಸಿದ್ದರು.
ಸುರೇಶ್‌ಕುಮಾರ್ ಉಸ್ತುವಾರಿ ಸಚಿವರಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದಂತೆ ಕೊಡಗಿನ ಶಾಸಕರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಕೊಡಗಿನ ಬದಲು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದರು. ಹೆಚ್ಚುವರಿ ಉಸ್ತುವಾರಿ ಸಚಿವ ಸ್ಥಾನ ಅಲಂಕರಿಸಿದ ವಿ. ಸೋಮಣ್ಣ ಆಡಳಿತಾರೂಢ ಶಾಸಕರ ಮಾತಿಗೆ ಶರಣಾಗಿ ಕಾರ್ಯನಿರ್ವಹಿಸಲಾರಂಭಿಸಿದರು. ಇದು ಶಾಸಕರಿಗೆ ಸಂತಸವುಂಟು ಮಾಡಿದೆ.
ಕೊಡಗಿಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರ ಗಮನ ಸೆಳೆಯಲು ಮತ್ತು ಹಿರಿಯ ಮುಖಂಡರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಲು ಬಿಜೆಪಿ ಕೊಡಗು ನಿಯೋಗ ಬೆಂಗಳೂರಿಗೆ ತೆರಳಲು ಉದ್ದೇಶಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ನೇತೃತ್ವದ ನಿಯೋಗ ಶೀಘ್ರದಲ್ಲೇ ಬೆಂಗಳೂರಿಗೆ ತೆರಳುವ ಮಾಹಿತಿ ಇದೆ.
ನಿಗಮ ಮಂಡಳಿ :
ರಾಜ್ಯ ರಾಜಕೀಯ ವಿದ್ಯಮಾನ ಗಮನಿಸಿದರೆ ಕೊಡಗಿನ ಶಾಸಕರು ಸಚಿವರಾಗುವ ಸಾಧ್ಯತೆ ಕ್ಷೀಣಸಿದೆ. ಸಿಎಂ ಆಪ್ತ ಕೆ.ಜಿ. ಬೋಪಯ್ಯ ಸಚಿವರಾಗುವ ನಿರೀಕ್ಷೆ ಪ್ರಾರಂಭಿಕ ದಿನದಿಂದಲೂ ಇತ್ತು. ಬಿಜೆಪಿ ಒಳಗೆ ಹೆಚ್ಚಿನ ಪೈಪೋಟಿ ಇರುವುದರಿಂದ ಕೊಡಗಿನ ಶಾಸಕರ ಬಗ್ಗೆ ಗಮನ ಹರಿಸುವ ಸಾಧ್ಯತೆ ವಿರಳ. ಅದಕ್ಕಾಗಿ ಕೊಡಗಿನವರಿಗೆ ಪ್ರಭಾವಿ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಇದೆ.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಒಂದು ನಿಗಮದ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಅಧ್ಯಕ್ಷ ಎಂ.ಬಿ. ದೇವಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಮಹಿಳಾ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂಬ ಮಾಹಿತಿ ಇದೆ.
ಕೊಡಗಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಮೊದಲ ಬೇಡಿಕೆ. ಯಾವ ಸಚಿವರಿಗೆ ಬೇಕಾದರೂ ಜಿಲ್ಲೆಯ ಉಸ್ತುವಾರಿ ನೀಡಲಿ. ನಮ್ಮ ತಕರಾರಿಲ್ಲ. ಕೊಡಗಿಗೆ ಸಚಿವ ಸ್ಥಾನ ನೀಡಲು ಮತ್ತು ಹಿರಿಯ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಕೇಳಲು ಬೆಂಗಳೂರಿಗೆ ಶೀಘ್ರವೇ ಕೊಡಗಿನ ನಿಯೋಗ ತೆರಳಲಿದೆ.
ಪಳೆಯಂಡ ರಾಬಿನ್ ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ.
ಬಿಜೆಪಿ ಜಿಲ್ಲಾಧ್ಯಕ್ಷನಾಗಿ ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡಿದ್ದೇನೆ. ಹಲವು ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಡಳಿತದ ಅನುಭವ ಹೊಂದಿದ್ದೇನೆ. ಪಕ್ಷ ನನಗೆ ಯಾವ ಜವಾಬ್ದಾರಿ ವಹಿಸಿದ್ದರೂ,ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಬಿ.ಬಿ. ಭಾರತೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ.