ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕುಸಿದಿದ್ದ ರಸ್ತೆ ರಿಪೇರಿ ಕಾಮಗಾರಿಯನ್ನು ಎಂ.ಎಸ್.ತನ್ಮಯಿ ಪರಿಶೀಲಿಸಿದರು. 
ಜಿಲ್ಲೆ

ಗೋಪಾಲಸ್ವಾಮಿ ಬೆಟ್ಟದ ರಸ್ತೆ ದುರಸ್ತಿ

ವಸಂತಕುಮಾರ್ ಬಿ

 ಗುಂಡ್ಲುಪೇಟೆ: ನಿರಂತರ ಮಳೆಗೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕುಸಿದಿದ್ದ ತಡೆಗೋಡೆ ನಿರ್ಮಾಣ ಮತ್ತು ಗುಂಡಿಯನ್ನು ಮುಚ್ಚುವ ಕಾಮಗಾರಿ ಪ್ರಗತಿಯನ್ನು ಕಂದಾಯಾಧಿಕಾರಿಗಳು ಪರಿಶೀಲಿಸಿದರು.

ಕಳೆದ ಮೂರು ದಿನಗಳ ಹಿಂದೆ ಬೆಟ್ಟದ ರಸ್ತೆಯ ರಿವಿಟ್‌ಮೆಂಟ್ ಕಲ್ಲುಗಳು ನೆಲಕ್ಕುರುಳುವ ಜತೆಗೆ ರಸ್ತೆಯ ನಡುವೆ ಮಣ್ಣು ಕುಸಿದು ಗುಂಡಿಯುಂಟಾಗಿತ್ತು. ಇದರಿಂದ ಜಿಲ್ಲಾಡಳಿತವು ಜುಲೈ 29 ಮತ್ತು 30ರಂದು ಬೆಟ್ಟಕ್ಕೆ ಹೋಗುವ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸೇರಿದ ಈ ರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಯನ್ನು ಕೈಗೊಂಡಿದ್ದಾರೆ.

ಬುಧವಾರ ಮಧ್ಯಾಹ್ನ ಸ್ಥಳಕ್ಕೆ ತಹಸೀಲ್ದಾರ್ ಎಂ.ಎಸ್.ತನ್ಮಯಿ ಹಾಗೂ ಹಂಗಳ ನಾಡಕಚೇರಿ ಅಧಿಕಾರಿಗಳು ಭೇಟಿ ನೀಡಿ ದುರಸ್ತಿ ಕಾಮಗಾರಿ ಪರಿಶೀಲಿಸಿದರು. ತಡೆಗೋಡೆಗಳ ರಿವಿಟ್‌ಮೆಂಟ್ ಕಾರ್ಯ ಬಹುತೇಕ ಮುಗಿದು ಗುಂಡಿ ಮುಚ್ಚುವ ಕಾಮಗಾರಿ ನಡೆಸಿದ್ದು, ಇನ್ನೂ ಸ್ವಲ್ಪ ಬಾಕಿಯುಳಿದಿದೆ. ಗುರುವಾರ ಪೂರ್ಣಗೊಳ್ಳಲಿದೆ. ನಂತರ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.