ಜಿಲ್ಲೆ

ಶಿರಸಿ ಟಿಎಸ್‌ಎಸ್ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ

ಶಿರಸಿ: ಸ್ಥಳೀಯ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿ (ಟಿಎಸ್‌ಎಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ, ಉಪಾಧ್ಯಕ್ಷರಾಗಿ ಎಂ.ಎನ್. ಭಟ್ ತೋಟಿಮನೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುರುವಾರ ನೂತನ ನಿರ್ದೇಶಕರ ಪ್ರಥಮ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲಕೃಷ್ಣ ವೈದ್ಯ, ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ.
ಸದಸ್ಯರು ನಿರ್ಭೀತಿಯಿಂದ ಸಂಘದಲ್ಲಿ ವ್ಯವಹಾರ ಮಾಡಬಹುದು. ನಾವು ಪಾರದರ್ಶಕವಾಗಿಯೇ ಆಡಳಿತ ಮಾಡುತ್ತೇವೆ. ಸಂಸ್ಥೆ ತನ್ನಿಂದಲೇ ನಡೆಯುತ್ತದೆ ಎಂಬ ಅಹಂ ಯಾರೊಬ್ಬರಲ್ಲೂ ಇರಬಾರದು ಎಂದರು.

ಸಂಸ್ಥೆಯಲ್ಲಿ ಸಾಕಷ್ಟು ಅಧ್ವಾನಗಳಿವೆ. ಅವುಗಳನ್ನು ಸರಿಪಡಿಸಲು ಸಮಿತಿ ರಚಿಸಿ ಚರ್ಚಿಸಲಾಗುವುದು. ಚುನಾವಣೆಗೆ ಮೊದಲೇ ಕೈಗೊಂಡ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಹಲವು ದುಂದುವೆಚ್ಚಗಳ ಬಗ್ಗೆ ಗಮನಕ್ಕೆ ಬಂದಿದೆ. ಇಲ್ಲಿನ 5 ವಾಹನಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.

ಹಿಂದಿನ ಆಡಳಿತ ಮಂಡಳಿ ಸಣ್ಣ ಪುಟ್ಟ ಸಹಕಾರಿ ಸಂಘಗಳನ್ನು ಕಡೆಗಣಿಸಿತ್ತು. ಆದರೆ, ನಾವು ಎಲ್ಲ ಸಹಕಾರಿ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಬೆಳೆ ಸಾಲ ಮರುಪಾವತಿ ಮತ್ತಿತರ ಸಂದರ್ಭದಲ್ಲಿ ಸದಸ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಯಾವುದೇ ಸಂದರ್ಭದಲ್ಲಿ ಸಂಘದ ನಿಯಮ ಮೀರಲು ಬಿಡುವುದಿಲ್ಲ. ಸಮಸ್ಯೆಗಳಿದ್ದಲ್ಲಿ ಸಂಘದ ಸದಸ್ಯರು ಯಾವುದೇ ವೇಳೆಯಲ್ಲಿ ಸಂಪರ್ಕಿಸಬಹುದು ಎಂದರು.

ಗಣಪತಿ ಜೋಶಿ, ದತ್ತಗುರು ಹೆಗಡೆ, ಪುರುಷೋತ್ತಮ ಹೆಗಡೆ, ವಸಂತ ಹೆಗಡೆ, ಅಶೋಕ ಹೆಗಡೆ, ರವೀಂದ್ರ ಹೆಗಡೆ ಹಿರೇಕೈ, ರವೀಂದ್ರ ಹಳದೋಟ, ಕೃಷ್ಣ ಹೆಗಡೆ, ವೀರೇಂದ್ರ ಗೌಡರ್, ದೇವೇಂದ್ರ ನಾಯ್ಕ, ನಿರ್ಮಲಾ ಭಟ್ , ವಸುಮತಿ ಭಟ್, ರಾಮಕೃಷ್ಣ ಹೆಗಡೆ ಕಡವೆ ಇದ್ದರು.