ಗೋಪಾಲಕೃಷ್ಣ ನಾಯರಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕಲಾವಿದ ಗೋಪಾಲಕೃಷ್ಣ ದೇವರು ಭಟ್ಟರನ್ನು ಗೌರವಿಸಲಾಯಿತು.  
ಜಿಲ್ಲೆ

ಗೋಪಾಲಕೃಷ್ಣ ನಾಯರಿ ಶ್ರೇಷ್ಠ ಕಲಾವಿದ

ವಿಜಯವಾಣಿ ಸುದ್ದಿಜಾಲ ಕೋಟ

ಕಲೆ ಮತ್ತು ಸಾಹಿತ್ಯ ಲೋಕದ ಬೆಳವಣಿಗೆಗೆ ನಮ್ಮ ಹಿರಿಯರ ದೇಣಿಗೆ ಅಪಾರ. ಅವರ ಶ್ರಮದಿಂದ ಸಾಹಿತ್ಯ ಉಳಿದಿದೆ. ಗೋಪಾಲಕೃಷ್ಣ ನಾಯರಿ ಅವರು ಒಬ್ಬ ಶ್ರೇಷ್ಠ ರಂಗಭೂಮಿ ಕಲಾವಿದ. ಈ ನಿಟ್ಟಿನಲ್ಲಿ ಅವರ ಸ್ಮರಣೆ ಮತ್ತು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಮಹತ್ವದ್ದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಇತ್ತೀಚೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ಸಮಸ್ತರು, ರಂಗ ಅಧ್ಯಯನ ಕೇಂದ್ರ ವತಿಯಿಂದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಸಹಕಾರದಲ್ಲಿ ಏರ್ಪಡಿಸಿದ್ದ ರಂಗಭೂಮಿ ನಿರ್ದೇಶಕ ದಿ.ಗೋಪಾಲಕೃಷ್ಣ ನಾಯರಿ ಅವರ ದ್ವಿತೀಯ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ 2025 ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಗುಂಡ್ಮಿ ವೈಕುಂಠ ಹೇರ್ಳೆ ಹಾಗೂ ಮೇಲು ಮಣ್ಣಿಗೆಯ ಸಂತೋಷ ಯಾಜಿ ಮಾತನಾಡಿದರು. ಹೊನ್ನಾವರದ ಕೆಕ್ಕಾರಿನ ರಂಗಭೂಮಿ ನಿರ್ದೇಶಕ ಗೋಪಾಲಕೃಷ್ಣ ದೇವರು ಭಟ್ಟರಿಗೆ ರಂಗ ಪ್ರಶಸ್ತಿ ಪ್ರದಾನಿಸಲಾಯಿತು. ವಕೀಲ ಬದರಿನಾಥ ನಾಯರಿ, ರಾಧಾಕೃಷ್ಣ ನಾಯರಿ, ಶಿವಕುಮಾರ್ ನಾಯರಿ ಉಪಸ್ಥಿತರಿದ್ದರು. ಗಣಪತಿ ನಾಯರಿ ಸ್ವಾಗತಿಸಿದರು. ಕಸಾಪ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಪ್ರಶಸ್ತಿ ಪತ್ರ ವಾಚಿಸಿದರು. ರಾಜಶೇಖರ ಹೆಬ್ಬಾರ್ ಪ್ರಸ್ತಾವನೆಗೈದರು. ಮಂಜುನಾಥ ನಾಯರಿ ವಂದಿಸಿದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.