ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮಲ್ಲಿ ರಂಗ ಸಂಗ ಮತ್ತು ಸಂಘ ಎರಡೂ ಬೆಳೆಸಬೇಕಿದೆ. ರಂಗ ಎನ್ನುವುದು ಸಾಮೀಪ್ಯ. ಸಂದಿಂದ ಸಂಘಟನೆಯಾಗುತ್ತದೆ. ಸಂಗದಷ್ಟೇ ಸಂಘಕ್ಕೂ ನಾವು ಮಹತ್ವ ಕೊಡಬೇಕು. ಆಗ ರಂಗ ಸಂಗಗಳು ಸಂಘಟನೆಯಾಗಿ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ನಗರದ ರಂಗಾಯಣ ಆವರಣದಲ್ಲಿನ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಗೋಪಾಲ ವಾಜಪೇಯಿ ಸ್ಮರಣೆ ನಿಮಿತ್ತ ರಂಗ-ಸಂಗ, ಆಟ-ಮಾಟ ಮತ್ತು ಬಹುರೂಪಿ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ರಂಗಸಂಜೆ ಸಮಾರಂಭದಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ರಂಗಭೂಪತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಲೇಖಕರು ತಮ್ಮ ನೆನಪು, ನೋವುಗಳನ್ನು ಬರವಣಿಗೆಗೆ ಇಳಿಸಬೇಕು. ಈ ಕಾರ್ಯವನ್ನು ಗೋಪಾಲ ವಾಜಪೇಯಿ ಮಾಡುತ್ತಿದ್ದರು. ರಂಗ ತಾಲೀಮಿಗೆ ಹೋದಾಗ ಅಲ್ಲೇ ರಂಗಗೀತೆಗಳನ್ನು ಬರೆದು ಕೊಡುತ್ತಿದ್ದರು. ಮಾಸ್ಟರ್ ಹಿರಣಯ್ಯ, ಬಿ.ವಿ. ಕಾರಂತರ ನಂತರ ರಂಗ ಜಂಗಮವಾಗಿ ಕೆಲಸ ಮಾಡಿದವರು ಗೋಪಾಲ ವಾಜಪೇಯಿ. ಇವತ್ತು ಅವರ ಹೆಸರು ನೆನಪಿಡುವಂತಹ ಕಾರ್ಯಕ್ರಮ ಆಗಿದೆ. ಊರಿದ ಬೀಜ ಬೆಳೆಯಲು ಬಹಳ ಕಾಲಬೇಕು. ಸಸಿ ಬೆಳೆಯಲು ಅವಕಾಶ ಬೇಕು. ಹಾಗೆಯೇ ಈ ಪ್ರಶಸ್ತಿ ಬೆಳೆಯುತ್ತದೆ ಎಂದರು.
ಹಿರಿಯ ಪತ್ರಕರ್ತ ಜಿ.ಎನ್.ಮೋಹನ ಮಾತನಾಡಿ, ಪ್ರಶಸ್ತಿಗೆ ರಂಗಭೂಪತಿ ಹೆಸರಿಡಲು ಕಾರಣ ಗೋಪಾಲ ವಾಜಪೇಯಿ ನಂದಭೂಪತಿ ನಾಟಕ. 5 ವರ್ಷದಿಂದ ಯೋಚನೆ ಮಾಡಿ ಕಾರ್ಯಕ್ರಮ ಈಗ ಮಾಡಿದ್ದೇವೆ. ಒಂದು ವರ್ಷ ಧಾರವಾಡದಲ್ಲಿ ಒಂದು ವರ್ಷ ಬೆಂಗಳೂರಿನಲ್ಲಿ ಕಾರ್ಯಕ್ರಮವಾಗಬೇಕು ಎಂದ ಅವರು, ಗೋಪಾಲ ವಾಜಪೇಯಿ ಅವರೊಂದಿಗಿನ ವೃತ್ತಿ ಜೀವನದ ನೆನಪುಗಳನ್ನು ಸ್ಮರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಶ್ರೀಪಾದ ಭಟ್ ಮಾತನಾಡಿದರು. ರಾಧಿಕಾ ವಾಜಪೇಯಿ, ಕುಟುಂಬಸ್ಥರು, ಇತರರು ಇದ್ದರು. ಮಹಾದೇವ ಹಡಪದ ಸ್ವಾಗತಿಸಿದರು. ರಾಜಕುಮಾರ ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕಣಿರ್ ನಿವಂದಿಸಿದರು.
ನಂತರ ಸ್ವರದೇಸಿ ತಂಡ ಮತ್ತು ರಾಘವ ಕಮ್ಮಾರ ತಂಡ ಗೋಪಾಲ ವಾಜಪೇಯಿ ರಚನೆಯೆ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.