ಹುಬ್ಬಳ್ಳಿ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿಯ ರಾಮದೇವರಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಂಕರ ಪಂಚಮಿ ಉತ್ಸವದಲ್ಲಿ ಹುಬ್ಬಳ್ಳಿಯ ಸಮಾಜ ಸೇವಕ ಮಹೇಂದ್ರ ಸಿಂಘಿ ಸೇರಿದಂತೆ ಐವರು ಸಾಧಕರಿಗೆ ‘ಗೋಪಾಲ ಗೌರವ’ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಮುಂಬೈನ ದಿನೇಶ ಶಹರಾ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಮಚಂದ್ರಾಪುರಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ವಹಿಸಿದರು.
ಆಲ್ ಇಂಡಿಯಾ ಜೈನ ಯುಥ್ ಫೆಡರೇಶನ ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷರಾಗಿ ಇದುವರೆಗೆ 50 ಸಾವಿರಕ್ಕಿಂತಲೂ ಹೆಚ್ಚು ಅಂಗವಿಕಲರಿಗೆ ಕೃತಕ, ಕೈ, ಕಾಲು ನೀಡುವ ಮೂಲಕ ಮೌನ ಕ್ರಾಂತಿ ಮಾಡಿರುವ ಹಾಗೂ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ದನ, ಕರು, ಅಕಳು, ಹಸು, ಗೋವು ಮತ್ತಿತರ ಪಶುಗಳಿಗೂ ಕೃತಕ ಕಾಲು ಉಚಿತವಾಗಿ ಜೋಡಿಸುವ ಕಾರ್ಯಗಳಲ್ಲಿ ತೋಡಗಿಸಿಕೊಂಡಿರುವುದರ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕೇರಳದ ಗೋ ಆಧಾರಿತ ಕೃಷಿ ಗವ್ಯ ಉತ್ಪನ್ನ ತಯಾರಿಕೆಯಲ್ಲಿ ಹೆಸರು ಮಾಡಿರುವ ಕೇರಳ ಕಾಸರಗೋಡಿನ ಪೆರಿಯದ ನಾಗರತ್ನಾ ವಿಷ್ಣು ಹೆಬ್ಬಾರ, ಕ್ಯಾನ್ಸರ್ಗೆ ಗವ್ಯ ಉತ್ಪನ್ನಗಳಿಂದ ಚಿಕಿತ್ಸೆ ನೀಡುವ ಕಾಸರಗೋಡಿನ ನೆಕ್ಕಲಕೆರಿಯ ಸುಬ್ರಹ್ಮಣ್ಯ ಪ್ರಸಾದ, ದೊಡ್ಡಬಳ್ಳಾಪುರದ ನೂರಾರು ಗವ್ಯ ಸಿದ್ದ ವೈದ್ಯರನ್ನು ತಯಾರು ಮಾಡಿರುವ ಘಾಟಿ ಸುಬ್ರಹ್ಮಣ್ಯದ ಡಾ. ಜೀವನ ಕುಮಾರ, ಸಾವಯವ ಕೃಷಿ ತಜ್ಞ ಬೈಲಹೊಂಗಲದ ಬಾಬುರಾವ ಪಾಟೀಲ ಅವರಿಗು ಸಹ ಈ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಪ್ರಶಸ್ತಿ ನೀಡಿದ ನಂತರ ಆಶೀರ್ವಚನ ನೀಡಿದ ರಾಘವೇಶ್ವರ ಭಾರತಿ ಸ್ವಾಮೀಜಿ ಸ್ವಾಮೀಜಿ, ಗೋವುಗಳೆಂದರೆ ಒಂದು ದೃಷ್ಟಿಯಲ್ಲಿ ಚಲಿಸುವ ವಿಶ್ವವಿದ್ಯಾಲಯಗಳು. ಬೆಂಚು, ಡೆಸ್ಕು, ಚಾಕಪೀಸ್ ಇಲ್ಲದಿದ್ದರೂ ಗೋವುಗಳು ಮೌನದಲ್ಲಿ ಮಾಡುವ ಬೋಧನೆ ಮನುಷ್ಯರನ್ನು ಸರಿದಾರಿಯಲ್ಲಿ ಹಚ್ಚುವ ದಾರಿದೀಪ ಎಂದರು. ಮುಂಬೈನ ದಿನೇಶ ಶಹರಾ ಫೌಂಡೇಶನ್ನ ಸಂಸ್ಥಾಪಕ ದಿನೇಶ ಶಹರಾ, ಮೀನಾಜಿ ಹಾಗೂ ಇತರರು ಇದ್ದರು.