ಚನ್ನರಾಯಪಟ್ಟಣ: ತಾಲೂಕಿನ ಯಾಚೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಎರಡು ಬಾಳೆಗೊನೆಗಳನ್ನು ಕಡಿದು ಸಾಗಿಸುತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಹಗ್ಗದಿಂದ ಕೈಗಳನ್ನು ಕಟ್ಟಿ ಗೂಸಾ ಕೊಟ್ಟು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕಾಳೇನಹಳ್ಳಿ ಗ್ರಾಮದ ನಂದೀಶ್ ಬಾಳೆಗೊನೆ ಕದ್ದ ಆರೋಪಿ. ನಾನು ಕೆ.ಆರ್.ಪೇಟೆ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದು, ಖರ್ಚಿಗೆ ಹಣವಿಲ್ಲದೆ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಹಲವು ದಿನಗಳಿಂದ ಗ್ರಾಮದ ಸುತ್ತಲಿನ ಬಾಳೆತೋಟಗಳಲ್ಲಿ ಆಗಾಗ ಬಾಳೆಗೊನೆಗಳ ಕಳ್ಳತನ ನಡೆಯುತ್ತಿದ್ದು, ಕಳ್ಳನನ್ನು ಹಿಡಿಯಲೇಬೇಕೆಂದು ಗ್ರಾಮದ ಕೆಲವರು ಕಾಯುತ್ತಿದ್ದರು. ಅದೇ ವೇಳೆಯಲ್ಲಿ ಈತ ಸಿಕ್ಕಿಬಿದ್ದಿದ್ದು, ಗೂಸಾ ಕೊಟ್ಟು ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಸುಮಾರಿನಲ್ಲಿ ಯಾಚೇನಹಳ್ಳಿ ಗ್ರಾಮದ ರೈತನೊಬ್ಬನ ಬಾಳೆ ತೋಟದ ಬಳಿಗೆ ಪಲ್ಸರ್ ಬೈಕ್‌ನಲ್ಲಿ ಬಂದ ನಂದೀಶ್ ಬೇಲಿಯ ಹೊರಭಾಗದಲ್ಲಿ ಬೈಕ್ ನಿಲ್ಲಿಸಿ ಒಳ ನುಗ್ಗಿ 2 ಬಾಳೆಗೊನೆಗಳನ್ನು ಕಡಿದಿದ್ದಾನೆ. ನಂತರ ಬಾಳೆಗೊನೆಗಳನ್ನು ಹೊರ ತಂದು ಬೈಕ್ ಮೇಲಿಟ್ಟುಕೊಂಡು ಹಗ್ಗದಿಂದ ಕಟ್ಟಲು ಮುಂದಾದಾಗ ಸ್ಥಳೀಯರಿಬ್ಬರು ಆಗಮಿಸಿ, ಆತನನ್ನು ಊರಿಗೆ ಕರೆತಂದು ಅವನೇ ತಂದಿದ್ದ ಹಗ್ಗದಿಂದ ಕೈಗಳನ್ನು ಕಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟರಲ್ಲಿ ಗ್ರಾಮದ ಪ್ರಮುಖರು ಸೇರಿ ಪ್ರಕರಣ ದಾಖಲು ಬೇಡ, ಮುಂದೆ ಹೀಗೆ ಮಾಡಬೇಡ. ಓದುವ ಸಲುವಾಗಿ ಕಳ್ಳತನ ಮಾಡಬೇಡ ಎಂದು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಮಾಡಿ ಕಳುಹಿಸಿದ್ದಾರೆ.