ಉಡುಪಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ ಇಬ್ಬರು ರೌಡಿಶೀಟರ್‌ಗಳನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ಬೈಂದೂರು ತಾಲೂಕು ನಂದನವನ ಗ್ರಾಮ ನಿವಾಸಿ ರವಿ ಅಲಿಯಾಸ್ ರವಿಚಂದ್ರ, ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಸೈಫುದ್ದೀನ್ ಅಲಿಯಾಸ್ ಸೈಫು ಬಂಧಿತರು.
ರವಿ ಎಂಬಾತ ಬೈಂದೂರು ಠಾಣೆ ಹಾಗೂ ಹಿರಿಯಡ್ಕ ಠಾಣೆಯಲ್ಲಿ ರೌಡಿಶೀಟ್ ಹೊಂದಿದ್ದು, 1996ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ. ಬೈಂದೂರು, ಕುಂದಾಪುರ, ಹಿರಿಯಡ್ಕ ಠಾಣೆಗಳಲ್ಲಿ, ದಕ್ಷಿಣ ಕನ್ನಡ, ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಹಲ್ಲೆ, ದೊಂಬಿ, ಸುಲಿಗೆ, ಕೊಲೆಗೆ ಪ್ರಯತ್ನ, ಅಪಹರಣ, ಕೋಮು ಗಲಭೆ ಸಹಿತ 21 ಪ್ರಕರಣಗಳು ದಾಖಲಾಗಿವೆ. ಈತ 65 ಮಂದಿ ಸಹಚರರನ್ನು ಹೊಂದಿದ್ದಾನೆ.
ಸೈಫು ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, 1995ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ. ಉಡುಪಿ ನಗರ, ಹಿರಿಯಡ್ಕ, ಮಣಿಪಾಲ ಮತ್ತು ಕುಂದಾಪುರ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆಯತ್ನ, ಅಪಹರಣ, ದೊಂಬಿ, ಹಲ್ಲೆ, ವಂಚನೆ ಸಹಿತ 19 ಪ್ರಕರಣ ದಾಖಲಾಗಿರುತ್ತದೆ. ಈತನೊಂದಿಗೆ 34 ಮಂದಿ ಸಹಚರರಿದ್ದಾರೆ.
ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಂತೆ ಕ್ರಮ ಜರುಗಿಸಿ ಜಿಲ್ಲಾಧಿಕಾರಿ ಬಂಧನ ಆದೇಶ ಹೊರಡಿಸಿದ್ದು, ರವಿಚಂದ್ರ ಎಂಬಾತನ್ನು ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಸೈಫುದ್ದೀನ್ ಸೈಫು ಎಂಬಾತನನ್ನು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿದೆ.