ಜಿಲ್ಲೆ

ಕಲ್ಲಂಗಡಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿ

ಎ. ಆರ್. ರಘುರಾಮ

ಅರಕಲಗೂಡು : ತಾಲೂಕಿನ ಸಿದ್ದಾಪುರ ಗೇಟ್ ಬಳಿ ಮಂಗಳವಾರ ರಾತ್ರಿ ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಆ್ಯಕ್ಸಲ್ ತುಂಡಾಗಿ ಪಲ್ಟಿಯಾಗಿದೆ.

ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಕಲ್ಲಂಗಡಿ ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನದ ಆಕ್ಸಲ್ ತುಂಡಾಗಿ ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೂಡ್ಸ್ ವಾಹನ ಬಿದ್ದ ರಭಸಕ್ಕೆ ಕಲ್ಲಂಗಡಿ ಹಣ್ಣುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ರೈತನಿಗೆ ಅಪಾರ ನಷ್ಟ ಉಂಟಾಗಿದೆ.

ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಸೋಮವಾರಪೇಟೆ, ಕುಶಾಲನಗರ ಕಡೆಗೆ ಹೋಗುವ ಮಾರ್ಗವೂ ಇದೇ ರೀತಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪರಿಣಾಮವಾಗಿ ಅಪಘಾತಗಳು ನಡೆಯುತ್ತಿವೆ ಎಂದು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರಗೌಡ ಆರೋಪಿಸಿದ್ದಾರೆ.