ಜಿಲ್ಲೆ

ವಿಘ್ನನಿವಾರಕನಿಗೆ ಸಂಭ್ರಮದ ವಿದಾಯ: ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕರು

Vijayanagara - Veerendra

ಹೊಸಪೇಟೆ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು, ಐದು ದಿನಗಳ ಕಾಲ ಭಕ್ತರಿಂದ ಆರಾಧಿಸಲ್ಪಟ್ಟ ವಿನಾಯಕನನ್ನು ಶುಕ್ರವಾರ ರಾತ್ರಿ ಸಂಭ್ರಮ, ಸಡಗರದೊಂದಿಗೆ ವಿಸರ್ಜಿಸಲಾಯಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳ ಹಿಮ್ಮೇಳ, ಡಿಜೆ ಹಾಗೂ ದ್ವನಿವರ್ಧಕಗಳ ಅಬ್ಬರದ ಸಂಗೀತದ ಹಿಮ್ಮೇಳದೊಂದಿಗೆ ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಹೊಸಪೇಟೆಯ ಮೇನ್ ಬಜಾರ್, ದೊಡ್ಡ ಮಸೀದಿ, ಮೂರಂಗಡಿ ವೃತ್ತ, ಪುಣ್ಯ ಮೂರ್ತಿ ವೃತ್ತ ಸೇರಿದಂತೆ ಪ್ರಮುಖ ವೃತ್ತಳಲ್ಲಿ ಬಾಣ ಬಿರುಸುಗಳನ್ನು ಬಿಟ್ಟು ಸಂಭ್ರಮಿಸಿದರು.

ಅದರಲ್ಲೂ ದೊಡ್ಡ ಮಸೀದಿ ಸಮೀಪಕ್ಕೆ ಬರುತ್ತಿದ್ದಂತೆ ಮೆರವಣಿಗೆ ರಂಗೇರುತ್ತಿತ್ತು. ಡಬಲ್ ಸೌಂಡ್, ಹತ್ತಾರು ಅಡಿ ಉದ್ದದ ಪಟಾಕಿ ಸರಗಳನ್ನು ಸುಟ್ಟು, ೧೫- ೨೦ ನಿಮಿಷಗಳ ಕಾಲ ಸಿಳ್ಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಬಳಿಕ ಪುಣ್ಯಮೂರ್ತಿ ಸರ್ಕಲ್, ಬಸ್ ನಿಲ್ದಾಣದ ಮಾರ್ಗವಾಗಿ ಕೆನಾಲ್‌ಗೆ ತಲುಪಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಜನ ಸಾಗರ:

ಈ ಬಾರಿ ಗಣೇಶೋತ್ಸವ ಮೆರವಣಿಗೆ ವೀಕ್ಷಣೆಗೆ ನಗರದ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಎಲ್ಲ ಗಣೇಶ ಮೂರ್ತಿಗಳು ಬಹುತೇಕ ಮೇನ್ ಬಜಾರ್, ದೊಡ್ಡ ಮಸೀದಿ ಮಾರ್ಗವಾಗಿ ಸಾಗುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಜನರು ನೆರೆದಿದ್ದರು. ಹಿರಿಕಿರಿ, ಹೆಣ್ಣು ಗಂಡು ಎನ್ನದೇ ಎಲ್ಲ ವಯೋಮಾನದವರು ಮೆರವಣಿಗೆ ವೀಕ್ಷಣೆಗೆ ಬಂದಿದ್ದರು. ಕೆಲ ಮಹಿಳೆಯರು ಪುಟ್ಟ ಕಂದಮ್ಮಗಳೊAದಿಗೆ ಆಗಮಿಸಿದ್ದರು. ತಡರಾತ್ರಿ ವರೆಗೆ ನಡೆದ ಮೆರವಣಿಗೆಯಲ್ಲಿ ಸಾಗಿ ಬಂದ ವಿನಾಯಕ ಮೂರ್ತಿಗಳನ್ನು ಕಣ್ತುಂಬಿಕೊAಡರು.