ಜಿಲ್ಲೆ

ವಿವಾದಿತ ಜಾತಿಗಣತಿಗೆ ಗುಡ್​ಬೈ: ಜನಾಕ್ರೋಶಕ್ಕೆ ಗೆಲುವು, ಮರುಸಮೀಕ್ಷೆ ಮಾಡಿ ಎಂದ ಹೈಕಮಾಂಡ್, 90 ದಿನ ಗಡುವು

ನವದೆಹಲಿ/ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಜನಗಣತಿ ಎಂದೇ ಬಿಂಬಿತವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಅಂಗೀಕಾರ ಹಾಗೂ ಶಿಫಾರಸು ಅನುಷ್ಠಾನ ಮಾಡಬೇಕೆಂಬ ಒತ್ತಾಸೆಗೆ ದಿಢೀರ್ ಬ್ರೇಕ್ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ಮುಂದಿನ 90 ದಿನದಲ್ಲಿ ಮರು ಸಮೀಕ್ಷೆ ನಡೆಸಿ ಮುಂದುವರಿಯುವಂತೆ ಸ್ಪಷ್ಟ ಸೂಚನೆ ನೀಡಿದೆ. ಆ ಮೂಲಕ ಜಾತಿ ಜೇನುಗೂಡಿಗೆ ಕಲ್ಲೆಸೆಯುವ ಆಲೋಚನೆ ಬಿಟ್ಟು ‘ಸರ್ವರನ್ನೂ ಸಮಾಧಾನಪಡಿಸುವ ಸೂತ್ರ’ಕ್ಕೆ ಜೈ ಎಂದಿದೆ.

ಮಂಗಳವಾರ ದೆಹಲಿಯ ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಜಾತಿ ಗಣತಿ ವಿಚಾರವಾಗಿ ಹೈಕಮಾಂಡ್ ತನ್ನ ನಿಲುವನ್ನು ಸ್ಪಷ್ಟಪಡಿಸಿತು.

ಜಾತಿ ಗಣತಿ ಬಗ್ಗೆ ವಿರೋಧವಿಲ್ಲ, ಜಾತಿ ಗಣತಿ ಆಗಬೇಕೆಂಬುದೇ ಪಕ್ಷದ ನಿಲುವು. ಅದನ್ನೇ ಪ್ರತಿಪಾದಿಸಿಕೊಂಡು ಬರಲಾಗಿದೆ. ಆದರೆ, ಕರ್ನಾಟಕದಲ್ಲಿ ನಡೆದಿದ್ದ ಸಮೀಕ್ಷೆ ಈಗ ಹಳಸಲಾಗಿದೆ. ಅದರ ಬಗ್ಗೆ ಸಾಕಷ್ಟು ಆಕ್ಷೇಪಣೆ ಇದೆ. ಆ ಕಾರಣಕ್ಕೆ ಕಡಿಮೆ ಕಾಲಮಿತಿಯಲ್ಲಿ ಮರು ಸಮೀಕ್ಷೆ ನಡೆಸುವುದು ಸೂಕ್ತ. ಅದನ್ನೇ ಮಾಡಿ ಎಂದು ಸ್ಪಷ್ಟ ಸೂಚನೆಯನ್ನು ಹೈಕಮಾಂಡ್ ನೀಡಿದೆ. ಗುರುವಾರ ನಡೆಯಲಿರುವ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ಕಾಂಗ್ರೆಸ್ ಜಾತಿ ಗಣತಿ ವರದಿಯ ಮರು ಸಮೀಕ್ಷೆ ನಡೆಸುವ ನಿರ್ಧಾರವನ್ನು ಒಪ್ಪಿದಂತಾಗಿದೆ. ಮೊದಲನೇ ಪುಟದಿಂದ...

ಜಾತಿ ಗಣತಿ ವರದಿಯನ್ನು ಏಪ್ರಿಲ್​ನಲ್ಲೇ ಬಿಡುಗಡೆ ಮಾಡಲಾಗಿದ್ದರೂ, ವರದಿ ಬಗ್ಗೆ ಸಂಪುಟ ಸಭೆಗಳಲ್ಲಿ ಯಾವುದೇ ನಿರ್ಣಯ ಆಗಿರಲಿಲ್ಲ. 3 ಸಚಿವ ಸಂಪುಟ ಸಭೆಗಳಲ್ಲೂ ಚರ್ಚೆ ಆದರೂ ಸರ್ಕಾರಕ್ಕೆ ಒಮ್ಮತಕ್ಕೆ ಬರಲು ಆಗಿರಲಿಲ್ಲ. ಈ ನಿಟ್ಟಿನಲ್ಲಿ ಸಿಎಂ, ಡಿಸಿಎಂ ಜತೆ ಸುದೀರ್ಘ ಎರಡೂವರೆ ಗಂಟೆ ಸಭೆ ನಡೆಸಿದ ಹೈ ಕಮಾಂಡ್, ನಿಗದಿತ ಸಮಯದಲ್ಲಿ ಮರು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತು. ಸಭೆ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ್ಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕದಲ್ಲಿ 2015 ರಲ್ಲಿ ನಡೆಸಲಾಗಿರುವ ಜಾತಿ ಗಣತಿ ಬಗ್ಗೆ ಕೆಲವು ವರ್ಗಗಳು ಆತಂಕ, ಆಕ್ಷೇಪ ವ್ಯಕ್ತಪಡಿಸಿದ್ದು, ನಿಗದಿತ ಸಮಯದೊಳಗೆ ಮರು ಸಮೀಕ್ಷೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಲಾಗಿದೆ ಎಂದರು. ಜೂನ್ 12 ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಗೆ ಸಂಬಂಧಿಸಿದ ವಿಷಯದ ಬಗ್ಗೆ ರ್ಚಚಿಸಲಿದ್ದಾರೆ. ಸರ್ಕಾರ ಈಗಾಗಲೇ ನಡೆಸಿರುವ ಗಣತಿ ಕುರಿತಂತೆ ಕೆಲವರಿಗೆ ದತ್ತಾಂಶದ ಬಗ್ಗೆ ವಿರೋಧವಿದೆ. ಜಾತಿ ಗಣತಿಯನ್ನು 10 ವರ್ಷಗಳ ಹಿಂದೆ ಮಾಡಿರುವುದರಿಂದ, ದತ್ತಾಂಶವು ಸ್ವಲ್ಪ ಹಳೆಯದಾಗಿದೆ. ನಿಗದಿತ ಸಮಯದೊಳಗೆ, ಅಂದರೆ 60, 70 ದಿನಗಳು ಅಥವಾ ಸರ್ಕಾರ ಯಾವುದೇ ಅವಧಿ ನಿಗದಿಪಡಿಸಿ ಮರು ಸಮೀಕ್ಷೆ ನಡೆಸುವಂತೆ ಪಕ್ಷ ಸೂಚಿಸಿದೆ ಎಂದರು.

ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. | ಸಿದ್ದರಾಮಯ್ಯ ಸಿಎಂ ಜಾತಿ ಗಣತಿಯ ದತ್ತಾಂಶ ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿಗೆ ತೀರ್ವನಿಸಲಾಗಿದೆ. 90 ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಿದ್ಧಪಡಿಸಲಾಗುವುದು. | ಡಿ.ಕೆ. ಶಿವಕುಮಾರ್ ಡಿಸಿಎಂ

ಹೈ ತಿರಸ್ಕಾರಕ್ಕೆ ಕಾರಣಗಳು

* ಜಾತಿ ಗಣತಿಯ ವಿಶ್ವಾಸಾರ್ಹತೆ ಬಗ್ಗೆ ಆಕ್ಷೇಪಣೆ

* ಅಭಿಪ್ರಾಯ ಆಧರಿಸಿ ರಾಹುಲ್, ಖರ್ಗೆ ನಿಲುವು

* ಸಮೀಕ್ಷೆಯ ದತ್ತಾಂಶಗಳ ಬಗ್ಗೆ ವ್ಯಾಪಕ ಅಪಸ್ವರ

* ಜಾತಿ ಗುರುತಿಸುವಿಕೆಯ ವ್ಯತ್ಯಾಸದ ಬಗ್ಗೆ ಟೀಕೆ

* ಸಂಘ ಸಂಸ್ಥೆ, ಮಠಾಧೀಶರ ಆಕ್ಷೇಪಣೆ ಪರಿಗಣನೆ

* ರಾಜಕೀಯವಾಗಿ ದೊಡ್ಡ ಪೆಟ್ಟು ಬೀಳುವ ಆತಂಕ

* ಸ್ವಪಕ್ಷೀಯ ಸಚಿವರು, ಶಾಸಕರ ತೀವ್ರ ವಿರೋಧ

* ಜಾತಿಗಣತಿ ಗಣತಿ ಬಗ್ಗೆ ಖಾಸಗಿ ಸಂಸ್ಥೆಗಳ ಎಚ್ಚರಿಕೆ

* ಎಚ್ಚರಿಕೆ ಹೆಜ್ಜೆ ಅನಿವಾರ್ಯ ಎಂಬ ಸಂದೇಶ

ಸಾಧ್ಯಾಸಾಧ್ಯತೆಗಳು

* ಜೂ.12ಕ್ಕೆ ವಿಶೇಷ ಸಂಪುಟದಲ್ಲಿ ಹಳೆಯ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ ಮರು ಸಮೀಕ್ಷೆಗೆ ನಿರ್ಣಯ

* ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣ

* ಉನ್ನತ ಮಟ್ಟದ ಸಮಿತಿ ರಚನೆ

* ಸಮೀಕ್ಷೆಗೆ ಉಲ್ಲೇಖಿತ ನಿಯಮ ಅಂತಿಮ, ಮುಂದಿನ ಹಂತದಲ್ಲಿ ಆಯೋಗದಿಂದ ಸಿದ್ಧತೆಗೆ ಸಮಿತಿ ರಚನೆ, ಮೊಬೈಲ್ ಅಪ್ಲಿಕೇಶನ್ ತಯಾರಿ, ತರಬೇತಿ, ಗಣತಿ

ರಾಜಕೀಯ ಲಗಾಮು ಸಂಕಲನ- ವ್ಯವಕಲನ

ಜಾತಿ ಗಣತಿಯ ಹಾಲಿ ವರದಿ ಕುರಿತ ವಿರೋಧಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಿರುವುದು ರಾಜಕೀಯ ಪಡಸಾಲೆಯಲ್ಲಿ ವಿವಿಧ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ಪಕ್ಷದೊಳಗೆ, ಹೊರಗೆ ಎಷ್ಟೇ ವಿರೋಧ ಬಂದರೂ ಸಿಎಂ ಸಿದ್ದರಾಮಯ್ಯ ರಾಜಿ ಇಲ್ಲವೇ ಇಲ್ಲ ಎಂಬ ಹಠ ಹಿಡಿದು ಜಾತಿ ಗಣತಿ ವಿಚಾರವನ್ನು ಒಂದು ಹಂತಕ್ಕೆ ತಂದಿದ್ದರು. ಜೂನ್ 12ರಂದು ನಡೆಯುವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸುವುದು ಮತ್ತು ವರದಿಯ ಶಿಫಾರಸು ಜಾರಿಗೆ ಮುಂದಡಿ ಇಡುವುದಷ್ಟೇ ಬಾಕಿ ಇತ್ತು. ಆದರೆ ಈ ವಿಷಯದಲ್ಲಿ ಸಿದ್ದರಾಮಯ್ಯರನ್ನು ನೇರವಾಗಿ ವಿರೋಧಿಸಲಾಗದ ಕಾಂಗ್ರೆಸ್​ನ ಹತ್ತು, ಹಲವು ನಾಯಕರು, ಶಾಸಕರು, ಪಕ್ಷದ ಮುಖಂಡರು ನೆರವಿಗಾಗಿ ಹೈಕಮಾಂಡ್ ಮೊರೆ ಹೋಗಿದ್ದರು. ಜಾತಿ ಗಣತಿಯಿಂದ ಆಗುವ ಹೊಸ ರಾಜಕೀಯ ಸಮೀಕರಣ, ಅದರ ಲಾಭ-ನಷ್ಟ, ಪಕ್ಷದ ಮೇಲಿನ ಪರಿಣಾಮ, ನಾಯಕತ್ವ ವಿಷಯ ಎಲ್ಲವನ್ನೂ ವಿವರಿಸಿದ್ದರು. ಒಂದರ್ಥದಲ್ಲಿ ಸಿದ್ದರಾಮಯ್ಯ ಕೊನೆಯ ಘಟ್ಟದಲ್ಲಿ ಹೈಕಮಾಂಡ್ ಮನವೊಲಿಸುವಲ್ಲಿ ಸಫಲತೆ ಕಾಣಲಿಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್​ನಲ್ಲಿದೆ. ಜತೆಗೆ ಮೌನವಾಗಿದ್ದೇ ಡಿ.ಕೆ.ಶಿವಕುಮಾರ್ ಗುರಿ ತಲುಪಿದರು ಎಂಬ ವ್ಯಾಖ್ಯಾನವೂ ನಡೆದಿದೆ.