ಬೆಳಗಾವಿ: ಉತ್ತಮ ದಂತ ವೈದ್ಯರಾಗಲು ಡೆಂಟಲ್ ವೈದ್ಯಶಾಸ್ತ್ರದ ಎಲ್ಲ ವಿಷಯಗಳನ್ನೂ ಸಮಾನ ಪ್ರಾಮುಖ್ಯತೆಯೊಂದಿಗೆ ಕಲಿಯಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕಾಹೆರ್ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸೆಂಟೆನರಿ ಸಭಾಂಗಣದಲ್ಲಿ ಶುಕ್ರವಾರ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಕಲ್ ರೇಡಿಯಾಲಜಿ (ಐಎಒಎಂಆರ್) ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪದವಿಪೂರ್ವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಗುರಿಯಾಗಿಟ್ಟುಕೊಂಡು ಕಲಿತು ವೈದ್ಯರಾದ ಬಳಿಕ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ದಂತ ವೈದ್ಯಶಾಸ್ತ್ರದ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿಶಿಷ್ಟವಾಗಿರುವ ವೈಜ್ಞಾನಿಕ ಸಮ್ಮೇಳನದಲ್ಲಿ 7 ರಾಜ್ಯಗಳ 300 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿ, ಚಲನಚಿತ್ರ ತಯಾರಿಕೆ, ಅತಿಥಿ ಉಪನ್ಯಾಸ ಮತ್ತು ಪ್ಯಾನಲ್ ಚರ್ಚೆ ನಡೆಯಲಿವೆ. ಐಎಒಎಂಆರ್ ಅಧ್ಯಕ್ಷೆ ಡಾ.ನೀತಾ ಮಿಶ್ರಾ, ಲಕ್ನೋ ಸಂಘಟನಾ ಸಮಿತಿಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಬಾಯಿಯ ಕಾಯಿಲೆಗಳು ಮತ್ತು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಕಾಡೆಮಿ ಕೈಗೊಂಡ ಉಪಕ್ರಮಗಳನ್ನು ವಿವರಿಸಿದರು. ಸಂಘಟನಾ ಅಧ್ಯಕ್ಷೆ ಡಾ.ವೈಶಾಲಿ ಕೇಳುಸ್ಕರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಅಂಜನಾ ಬಾಗೇವಾಡಿ ವಂದಿಸಿದರು.