ವಿಜಯವಾಣಿ ಸುದ್ದಿಜಾಲ ಗದಗ
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹೇರಿರುವ ಸಂಡೇ ಲಾಕ್ಡೌನ್ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಅಲ್ಲಲ್ಲಿ ಕೆಲವರು ಅನಗತ್ಯವಾಗಿ ರಸ್ತೆಗಿಳಿದರು. ಅಂಥವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ಹಾಲು, ಔಷಧಿ, ಅಗತ್ಯ ವಸ್ತು ಹೊರತುಪಡಿಸಿ ಯಾವುದೇ ವಹಿವಾಟು ನಡೆಯಲಿಲ್ಲ. ಸಾರಿಗೆ ಬಸ್ಗಳ ಸಂಚಾರ ಬಂದ್ ಆಗಿದ್ದರಿಂದ ಜನರಿಲ್ಲದೇ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಗದಗ- ಬೆಟಗೇರಿ ಅವಳಿ ನಗರದಲ್ಲಿ ಸಾರ್ವಜನಿಕರು ಹೊರಗೆ ಬರಲಿಲ್ಲ. ಅವಳಿ ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 500 ದಾಟಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಹಾಲು, ಔಷಧಿ ಮುಂತಾದ ಅಗತ್ಯ ವಸ್ತುಗಳಿಗೆ ಮಾತ್ರ ಜನರು ಹೊರಗೆ ಬಂದರು. ಕೆಲಸ ಮುಗಿದ ತಕ್ಷಣ ಮನೆ ಸೇರಿದರು.
ಸ್ಟೇಷನ್ ರಸ್ತೆ, ಟಾಂಗಾಕೂಟ, ಮುಳಗುಂದ ನಾಕಾ, ಕಳಸಾಪೂರ ರಸ್ತೆ, ಮುಳಗುಂದ ರಸ್ತೆ, ಕೆ.ಸಿ. ರಾಣಿ ರಸ್ತೆ, ಬೆಟಗೇರಿ ಬಸ್ ನಿಲ್ದಾಣದ ಬಳಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಸಂಜೆ ವೇಳೆಗೆ ಅಲ್ಲಲ್ಲಿ ಚಹಾ ಅಂಗಡಿಗಳು ತೆರೆದಿದ್ದವು. ಅನೇಕರು ಚಹಾ ಸೇವಿಸುತ್ತ ಹರಟೆ ಹೊಡೆಯುತ್ತಿದ್ದುದು ಕಂಡುಬಂತು.
ಬೈಕ್ ಸವಾರರಿಗೆ ಫೈನ್: ಗದಗ ಬೆಟಗೇರಿ ಅವಳಿ ನಗರದಲ್ಲಿ ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಹತ್ತಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. 25 ಬೈಕ್ ಸವಾರರಿಗೆ ದಂಡ ವಿಧಿಸಲಾಗಿದೆ. ಅಲ್ಲಲ್ಲಿ ಬೈಕ್ ಸವಾರರು ಪೊಲೀಸರ ಕಣ್ಣು ತಪ್ಪಿಸಿ ಸಂಚರಿಸುತ್ತಿರುವುದು ಕಂಡುಬಂದಿತು.
ಬಿಕೋ ಎನ್ನುತ್ತಿದ್ದ ಮಾರುಕಟ್ಟೆ: ನರಗುಂದ ಪಟ್ಟಣ ಸೇರಿ ತಾಲೂಕಿನಾದ್ಯಂತ ಭಾನುವಾರ ಲಾಕ್ಡೌನ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಕೆಲವರು ನಿಯಮ ಉಲ್ಲಂಘಿಸಿ ಸಂಚಾರಕ್ಕೆ ಮುಂದಾದರು. ಅಂಥವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ಪಟ್ಟಣದ ಶಿವಾಜಿ ವರ್ತಲದಲ್ಲಿ ನಿಂತಿದ್ದ ಪೊಲೀಸರು ಅನಗತ್ಯವಾಗಿ ಸಂಚರಸುತ್ತಿದ್ದ ಕೆಲವರಿಗೆ ಲಾಠಿ ರುಚಿ ತೋರಿಸಿದರೆ, ಇನ್ನೂ ಹಲವರಿಗೆ ದಂಡ ವಿವಿಧಿಸಿದರು.
ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅಗತ್ಯ ಸರಕು ವಾಹನಗಳ ಸಂಚಾರ ಕಂಡುಬಂತು.
ಸಂಪೂರ್ಣ ಬೆಂಬಲ: ಶಿರಹಟ್ಟಿ ತಾಲೂಕಿನಾದ್ಯಂತ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ 3ನೇ ಸಂಡೇ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಪ್ರತಿ ಸಂಡೇ ಕಡ್ಡಾಯ ಲಾಕ್ಡೌನ್ ಘೊಷಿಸಿರುವುದರಿಂದ ಶನಿವಾರ ವಾರದ ಸಂತೆ ನಡೆಯುತ್ತಿತ್ತು. ಆದರೆ, ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣದ ದೃಷ್ಟಿಯಿಂದ ಜಿಲ್ಲಾಡಳಿತದ ಸೂಚನೆ ಮೇರೆಗೆ ಈ ಶನಿವಾರದ ಸಂತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಶನಿವಾರವೂ ವ್ಯಾಪಾರ ವಹಿವಾಟು ನಡೆಯಲಿಲ್ಲ.
ಇನ್ನು ಭಾನುವಾರ ಔಷಧಿ ಮತ್ತು ಹಾಲು ಮಾರಾಟ ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಬೆಳಗ್ಗೆಯಿಂದಲೇ ಸಾರಿಗೆ ಬಸ್, ಆಟೋ, ಟಂಟಂ, ಇತರ ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರಸ್ತೆಗಳು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು.
ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ, ಮಾಸ್ಕ್ ಧರಿಸದ ಬೈಕ್ ಸವಾರರಿಗೆ ಪೊಲೀಸರು ಬುದ್ದಿ ಹೇಳಿ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ತಾಲೂಕಿನ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬೆಳ್ಳಟ್ಟಿ, ಹೆಬ್ಬಾಳ, ಕಡಕೋಳ, ಮಾಗಡಿ ಸೇರಿ ಬಹುತೇಕ ಕಡೆ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಎಸ್.ಎಂ. ನಾಯಕ, ಪೊಲೀಸ್ ಸಿಬ್ಬಂದಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಹೂವಿನ ವ್ಯಾಪಾರಕ್ಕಿಲ್ಲ ಅಡ್ಡಿ: ಮುಂಡರಗಿ ಪಟ್ಟಣದಲ್ಲಿ ಭಾನುವಾರ ಬಹುತೇಕ ಸಾರ್ವಜನಿಕರು ಲಾಕ್ಡೌನ್ ಪಾಲನೆ ಮಾಡಿದರು. ಆದರೆ, ಕೆಲವರು ಅಲ್ಲಲ್ಲಿ ಅನಗತ್ಯವಾಗಿ ರಸ್ತೆಗಿಳಿದರು. ಅವರಿಗೆ ಪೊಲೀಸರು ತಿಳಿವಳಿಕೆ ನೀಡಿ ಮನೆಗೆ ಕಳಿಸಿದರು.
ಅಲ್ಲಲ್ಲಿ ಬೈಕ್ ಸಂಚಾರ ಕಂಡುಬಂತು. ಬಸ್ ನಿಲ್ದಾಣ ಬಣಗುಡುತ್ತಿತ್ತು. ಮುಖ್ಯಬಜಾರ್ ಸೇರಿ ಹಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಹೂವಿನ ವ್ಯಾಪಾರಕ್ಕಿಲ್ಲ ಅಡ್ಡಿ: ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಭಾಗದಲ್ಲಿ ಹೂವಿನ ವ್ಯಾಪಾರ ಎಂದಿನಂತಿತ್ತು. ಜನರು ಕೂಡ ಬಂದು ಖರೀದಿಸುತ್ತಿದ್ದರು. ಔಷಧಂಗಡಿ, ಆಸ್ಪತ್ರೆಗಳು, ತರಕಾರಿ, ಹಾಲು, ಮಾಂಸದಂಗಡಿಗಳು ತೆರೆದಿದ್ದವು.
ಬಹುತೇಕ ಯಶಸ್ವಿ: ನರೇಗಲ್ಲ ಪಟ್ಟಣ ಹಾಗೂ ಹೋಬಳಿಯಾದ್ಯಂತ ಭಾನುವಾರ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಜಕ್ಕಲಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಡ.ಸ. ಹಡಗಲಿ, ಕುರಡಗಿ, ಯರೇಬೇಲೇರಿ, ಗುಜಮಾಗಡಿ ಸೇರಿ ಹೋಬಳಿಯ ಬಹುತೇಕ ಗ್ರಾಮಗಳು ಸಂಪೂರ್ಣ ಸ್ಥಬ್ಧವಾಗಿದ್ದವು.
ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಎಚ್ಚರಿಕೆ ನೀಡಿದರು.
ಔಷಧಿ ಮತ್ತು ಹಾಲಿನ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು. ನರೇಗಲ್ಲ ಪಿಎಸ್ಐ ಬಿ.ಬಿ. ಕೊಳ್ಳಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.