ಜಿಲ್ಲೆ

ಮೈಸೂರು ಜಿಲ್ಲಾ ತಂಡ ಶುಭಾರಂಭ

Mysuru

ಮೈಸೂರು: ಸಾಂಘಿಕ ಪ್ರದರ್ಶನ ನೀಡಿದ ಮೈಸೂರು ಜಿಲ್ಲಾ ತಂಡ ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದಲ್ಲಿ ಶುಭಾರಂಭ ಮಾಡಿತು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್, ರಾಜ್ಯ ವಾಲಿಬಾಲ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಆರಂಭಗೊಂಡ ಹೊನಲು-ಬೆಳಕಿನ ಪಂದ್ಯಾವಳಿಯ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಉತ್ತರ ಕನ್ನಡ ತಂಡದ ವಿರುದ್ಧ 2-0 ನೇರ ಸೆಟ್‌ಗಳಿಂದ ಜಯ ಸಾಧಿಸಿತು.


ಪಂದ್ಯಾವಳಿಗೆ ಚಾಲನೆ: ಪಂದ್ಯಾವಳಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಕೋರಿದರು. ಮೇಯರ್ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಎಂ.ಸಿ.ರಮೇಶ್, ಮೈಸೂರು ವಿವಿ ದೈಹಿಕ ಶಿಕ್ಷಣ ಪ್ರಭಾರ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ವಾಲಿಬಾಲ್ ಸಂಸ್ಥೆಯ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಪ್ರೊ.ಚಂದ್ರಕುಮಾರ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ್ಷ ಸಿ.ವೆಂಕಟೇಶ್, ಕಾರ್ಯದರ್ಶಿ ಎಸ್.ಗಿರೀಶ್, ತರಬೇತುದಾರ ಸುದರ್ಶನ್, ರಾಜ್ಯ ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ಕೆ.ನಂದಕುಮಾರ್ ಇತರರಿದ್ದರು.

ಪಂದ್ಯಾವಳಿಯು 29ರವರೆಗೆ ನಡೆಯಲಿದೆ. 33 ಪುರುಷ, 26 ಮಹಿಳಾ ತಂಡಗಳು ಪ್ರಶಸ್ತಿಗಾಗಿ 4 ಗುಂಪುಗಳಲ್ಲಿ ಸೆಣಸಲಿವೆ. ಹೆಸರಾಂತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. 69ನೇ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ರಾಜ್ಯ ಪುರುಷ ಮತ್ತು ಮಹಿಳಾ ತಂಡಕ್ಕೆ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ. ಲೀಗ್ ಕಮ್ ನಾಕ್‌ಔಟ್ ಮಾದರಿಯಲ್ಲಿ ಪಂದ್ಯ ಆಯೋಜನೆಗೊಂಡಿದೆ.