ನೆಲಮಂಗಲ: ಉತ್ತಮ ರಸ್ತೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಸಂಪತ್ ಅಭಿಪ್ರಾಯಪಟ್ಟರು.
ತಾಲೂಕಿನ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಲಿಂಗೇನಹಳ್ಳಿ ಮತ್ತು ಯಂಟಗಾನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವಿಶೇಷ ಅನುದಾನದಲ್ಲಿ ಗ್ರಾಮದ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ರಾಜಧಾನಿಗೆ ಸಮೀಪವಿದ್ದರೂ ಇಂದಿಗೂ ಅನೇಕ ಹಳ್ಳಿಗಳಿಗೆ ಸಮರ್ಪಕ ರಸ್ತೆ ಸೌಲಭ್ಯವಿಲ್ಲ. ಸುಮಾರು ವರ್ಷಗಳಿಂದಲೂ ಹದೆಗೆಟ್ಟಿದ್ದ ಗ್ರಾಮದ ರಸ್ತೆಯನ್ನು . ಕೆಲ ಗ್ರಾಮಸ್ಥರ ಮನವಿ ಮೇರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮದ ಸುತ್ತಮುತ್ತ ಇದ್ದ ರೈತರ ಜಮೀನು ಬಡಾವಣೆಗಳಾಗಿ ಪರಿವರ್ತನೆಯಾಗುತ್ತಿದ್ದರೂ ರಸ್ತೆ ಅಭಿವೃದ್ಧಿಯಾಗಿರಲಿಲ್ಲ. ಮಳೆಗಾಲದಲ್ಲಿ ಗ್ರಾಮಕ್ಕೆ ಬರುವುದು ದುಸ್ತರವಾಗಿತ್ತು. ಗ್ರಾಮಸ್ಥರ ಮನವಿ ಆಲಿಸಿದ ಜಿಪಂ ಸದಸ್ಯರು ಗ್ರಾಮಕ್ಕೆ ಉತ್ತಮವಾದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿರುವುದು ಸಂತಷ ತಂದಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎನ್.ಸುರೇಶ್ ತಿಳಿಸಿದರು.
ಲೋಕೋಪಯೋಗಿ ಇಲಾಖೆ ವಿಶೇಷ ಅನುದಾನದಡಿ ಗ್ರಾಪಂ ವ್ಯಾಪ್ತಿಯ ಯಂಟಗಾನಹಳ್ಳಿಯಿಂದ ಸೋಲದೇವನಹಳ್ಳಿಗೆ ಮಾರ್ಗ ಕಲ್ಪಿಸುವ 2 ಕಿಮೀ ಉದ್ದದ 1.65 ಲಕ್ಷ ರೂ., ರಾ.ಹೆ.48 ನಿಂದ ಕಲ್ಯಾಣಪುರ ಮಾರ್ಗದ ಸುಮಾರು 1.5 ಕಿ.ಮೀ ಉದ್ದದ ರಸ್ತೆಗೆ 1.50 ಲಕ್ಷ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಪಿಡಿಒ ಪ್ರಶಾಂತ್ ಮಾಹಿತಿ ನೀಡಿದರು.
ಮುಖಂಡರಾದ ಜಿ.ವಿಜಯ್‌ಕುಮಾರ್, ಸಂಪತ್‌ಬಾಬು, ವೈ.ಎಚ್.ಹನುಮಯ್ಯ, ಎಚ್.ಎಂ.ಮಾದಯ್ಯ, ರಂಗಪ್ಪ, ಎಚ್.ಹನುಮಯ್ಯ, ಎಂ.ರಾಮಕೃಷ್ಣಯ್ಯ, ಮುನಿಕೃಷ್ಣಪ್ಪ, ಸಿ.ಮುನಿರಾಜು, ಗ್ರಾಪಂ ಆಡಳಿತಾಧಿಕಾರಿ ಸುಬ್ರಹ್ಮಣಿ, ಕಾರ್ಯದರ್ಶಿ ವಿ.ಹರ್ಷ, ಬಿಲ್‌ಕಲೆಕ್ಟರ್ ಸಿ.ಮುನಿರಾಜು, ಗುತ್ತಿಗೆದಾರ ಅರುಣ್ ಮತ್ತಿತರರಿದ್ದರು.