ಜಿಲ್ಲೆ

ಮೈಸೂರಿನಲ್ಲಿ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ಗೆ ಉತ್ತಮ ಪ್ರತಿಕ್ರಿಯೆ

ಅವಿನಾಶ್ ಜೈನಹಳ್ಳಿ ಮೈಸೂರು

ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ರ್ಚಚಿಸಲು ರಾಜ್ಯ ಸರ್ಕಾರ, ರಾಷ್ಟ್ರಿಯ ಆರೋಗ್ಯ ಅಭಿಯಾನದಡಿ ಆರಂಭಿಸಿರುವ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ (ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್)ಗಳಿಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಮಹಿಳೆಯರು ತಮ್ಮ ಆರೊಗ್ಯ ಸಮಸ್ಯೆ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದಾರೆ. ಹದಿಹರೆಯದವರಿಗೆ ದೈಹಿಕ ಬದಲಾವಣೆ, ವೈಯಕ್ತಿಕ ಶುಚಿತ್ವ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸಲಾಗುತ್ತಿದೆ. 30 ವರ್ಷ ಮೆಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದ್ದು, ಮಹಿಳೆಯರು ಪರಿಣಾಮಕಾರಿಯಾಗಿ ಇದರ ಉಪಯೋಗ ಪಡೆಯುತ್ತಿದ್ದಾರೆ.

ನಗರದ ಮಹಿಳೆಯರು ನಾಚಿಕೆ, ಹಿಂಜರಿಕೆ ಸ್ವಭಾವ ಬಿಟ್ಟು ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ಗಳಿಗೆ ಹೋಗಿ ಮುಕ್ತವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಪೈಲಟ್ ಯೋಜನೆ ಜಾರಿಯಾಗಿ 10 ತಿಂಗಳಿಂದ ಸೇವೆ ನೀಡುತ್ತಿದೆ. ಮೈಸೂರಿನಲ್ಲಿ ಸದ್ಯ 10 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ ಆರಂಭವಾಗಿವೆ. ಇತ್ತೀಚೆಗೆ ತಜ್ಞ ವೈದ್ಯರ ಉಚಿತ ಸೇವೆಯೂ ಚಾಲನೆಗೊಂಡಿದೆ. ಮಹಿಳೆಯರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದ್ದು, ಹೆಚ್ಚು ಜನರು ಕ್ಲಿನಿಕ್‌ಗಳಿಗೆ ಆಗಮಿಸಿ ಆರೋಗ್ಯ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ನಗರದ ಪೈಲಟ್ ಯೋಜನೆ ಯಶಸ್ವಿಯಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಈ ಮಾದರಿಯ ಕ್ಲಿನಿಕ್‌ಗಳನ್ನು ಆರಂಭಿಸುವ ನಿರೀಕ್ಷೆ ಇದೆ.

ದುಂದು ವೆಚ್ಚಕ್ಕೆ ಕಡಿವಾಣ

ವೆಲ್‌ನೆಸ್ ಕ್ಲಿನಿಕ್‌ಗಳಲ್ಲಿ ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ ವಿಶೇಷ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಮಾಲೋಚನೆ, ಪರೀಕ್ಷೆ, ಔಷಧ ಉಚಿತವಾಗಿ ದೊರೆಯುತ್ತಿದೆ. ಬಡಾವಣೆಗಳ ಹಂತದಲ್ಲಿಯೇ ವಿಶೇಷ ಸೇವೆ ದೊರೆಯುತ್ತಿರುವುದರಿಂದ ಮಹಿಳೆಯರು ತಜ್ಞವೈದ್ಯರ ಸೇವೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಿದೆ. ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗುತ್ತಿದೆ. ಕ್ಯಾನ್ಸರ್, ಕಿಡ್ನಿ ಸೇರಿದಂತೆ ವಿವಿಧ ಕಾಯಿಲೆಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಕಾಯಿಲೆ ಪೀಡಿತ ಮಹಿಳೆಯರು ಖಾಸಗಿ ಕ್ಲಿನಿಕ್‌ಗಳಿಗೆ ದುಂದುವೆಚ್ಚ ಮಾಡುವುದು ತಪ್ಪುತ್ತಿದೆ.

ವಿವಿಧ ರೀತಿಯ ಪರೀಕ್ಷೆ

ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಸಾಮಾನ್ಯ ಪಿಎಚ್‌ಸಿಗಳಂತೆ ಜನರಲ್ ಒಪಿಡಿ ಇರುತ್ತದೆ. ಇದರ ಜತೆಗೆ ವಿಶೇಷ ತಜ್ಞರ ಸೇವೆಯೂ ಲಭ್ಯ. ಇವರ ಬಳಿ ಸಮಾಲೋಚನೆಗೆ ಮಹಿಳೆಯರಿಗೆ ಮೊದಲ ಆದ್ಯತೆ, ವಯೋವೃದ್ಧರು ಹಾಗೂ ಇತರರಿಗೆ ನಂತರದ ಆದ್ಯತೆ ನೀಡಲಾಗುತ್ತದೆ. ಎಲ್ಲ ರೀತಿಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಮಾತ್ರವಲ್ಲದೆ, ಉಚಿತ ಸಮಾಲೋಚನೆ ಹಾಗೂ ಚಿಕಿತ್ಸೆ ದೊರೆಯುತ್ತದೆ. ಬಳಿಕ ಉನ್ನತ ಮಟ್ಟದ ಚಿಕಿತ್ಸೆಗೆ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡಲಾಗುತ್ತದೆ. ಕ್ಷೇಮ ಚಟುವಟಿಕೆಗಳಾದ ಯೋಗ, ಧ್ಯಾನ, ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿ ಪಾಲನೆ ಕುರಿತು ತರಬೇತಿ ನೀಡಲಾಗುತ್ತಿದೆ. ಹದಿಹರೆಯದವರ ಮತ್ತು ಮಕ್ಕಳ ಆರೊಗ್ಯ ಮಟ್ಟ ಸುಧಾರಣೆ, ಮಹಿಳಾ ಸಂಬಂಧಿತ ಇತರ ರಾಷ್ಟ್ರಿಯ ಕಾರ್ಯಕ್ರಮಗಳನ್ನು ಈ ಕ್ಲಿನಿಕ್‌ಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನಿಸಲಾಗುತ್ತಿದೆ.

ನಗರದಲ್ಲಿ ಒಟ್ಟು 21 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೊಂದರಂತೆ 10 ನಗರ ಪಿಎಚ್‌ಸಿಗಳಲ್ಲಿ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ ತೆರೆಯಲಾಗಿದೆ. ಇದೀಗ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಸುಮಾರು ಹತ್ತು ವಿಭಾಗಗಳ ವಿಶೇಷ ತಜ್ಞ ವೈದ್ಯರ ಉಚಿತ ಸೇವೆ ಶುರು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಯಾವ್ಯಾವ ತಜ್ಞ ವೈದ್ಯರ ಸೇವೆ?

ಸೀರೋಗ ತಜ್ಞರು, ಮೂಳೆ ತಜ್ಞರು, ಫಿಜಿಷಿಯನ್, ಮನೋರೋಗ ತಜ್ಞ ವೈದ್ಯ, ಶಸಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಒಬಿಜಿ, ಇಎನ್‌ಟಿ ವಿಭಾಗಗಳಿಗೆ ವಿಶೇಷ ತಜ್ಞರ ನೇಮಕವಾಗಿದೆ. ಒಟ್ಟು 10 ತಜ್ಞ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಿತ್ಯವೂ ಈ ವೈದ್ಯರು ರೊಟೇಷನ್ ಪದ್ಧತಿಯಲ್ಲಿ ನಗರದ 10 ಪಿಎಚ್‌ಸಿಗಳಲ್ಲಿ ತಿಂಗಳು ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ವೆಲ್‌ನೆಸ್ ಕ್ಲಿನಿಕ್‌ಗಳ ಮುಂಭಾಗದಲ್ಲಿ ಯಾವ ದಿನ ಯಾವ ತಜ್ಞ ವೈದ್ಯರು ಕೆಲಸ ಮಾಡುತ್ತಾರೆ ಎಂಬ ಮಾಹಿತಿ ಫಲಕ ಅಳವಡಿಸಲಾಗಿದೆ.

ಎಲ್ಲೆಲ್ಲಿವೆ?: ರಾಜೇಂದ್ರನಗರ ಯುಪಿಎಚ್‌ಸಿ, ನಜರ್‌ಬಾದ್ ಯುಪಿಎಚ್‌ಸಿ, ಬನ್ನಿಮಂಟಪ, ಟಿ.ಕೆ. ಬಡಾವಣೆ, ನಾಚನಹಳ್ಳಿಪಾಳ್ಯ, ಜಿ.ಬಿ. ಪಾಳ್ಯ, ಕುಂಬಾರಕೊಪ್ಪಲು, ಸುಬ್ರಹ್ಮಣ್ಯನಗರ, ಶಾಂತಿನಗರ.

ನಗರದಲ್ಲಿ 10 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ (ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್)ಗಳನ್ನು ತೆರೆಯಲಾಗಿದ್ದು, ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಸಂಕುಚಿತ ಮನೋಭಾವದಿಂದ ಕೆಲ ಆರೋಗ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಇದರಿಂದ ಹೆಚ್ಚಾಗಿ ಹೃದಯ ರಕ್ತನಾಳ, ಸ್ತನ, ಬಾಯಿ, ಗರ್ಭ ಕಂಠದ ಕ್ಯಾನ್ಸರ್ ಕಡೇ ಹಂತದಲ್ಲಿ ಪತ್ತೆಯಾಗುತ್ತಿದೆ. ಮಹಿಳಾ ವೆಲ್‌ನೆಸ್ ಕ್ಲಿನಿಕ್‌ಗಳಿಂದ ಈ ಸಮಸ್ಯೆ ದೂರವಾಗಲಿದೆ.ಡಾ.ಪಿ.ಸಿ.ಕುಮಾರಸ್ವಾಮಿಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ