ಶಿವಮೊಗ್ಗದಲ್ಲಿ ಎನ್‌ಎಚ್ ಆಸ್ಪತ್ರೆಯಿಂದ ಆಯೋಜಿಸಿದ್ದ ವಾಕಥಾನ್‌ಗೆ ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಚಾಲನೆ ನೀಡಿದರು. ಡಾ. ಚಂದ್ರಶೇಖರ್, ಡಾ. ಎನ್.ಎಸ್.ಶ್ರೀವತ್ಸ, ಡಾ. ಆರ್.ಬಾಲಸುಬ್ರಮಣಿ, ವರ್ಗೀಸ್ ಜಾನ್, ಎಸ್.ಎನ್.ಶೈಲೇಶ್ ಇತರರಿದ್ದರು. 
ಜಿಲ್ಲೆ

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವಾಕಥಾನ್‌ಗೆ ಉತ್ತಮ ಸ್ಪಂದನೆ

ಶಿವಮೊಗ್ಗ: ವಿಶ್ವ ಹೃದಯ ದಿನದ ಅಂಗವಾಗಿ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸಾವಿರಾರು ಜನರು ಹೆಜ್ಜೆ ಹಾಕಿದರು.

ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಹೃದಯವು ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಸತತವಾಗಿ ಬಡಿದುಕೊಳ್ಳುತ್ತದೆ. ಆದರೆ ಇತ್ತೀಚೆಗೆ ಸಣ್ಣ ವಯಸ್ಸಿನವರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿ. ಹಾಗಾಗಿ ಹೃದಯದ ಕಾಳಜಿ ಅತ್ಯವಶ್ಯ ಎಂದರು. ಎನ್.ಎಚ್.ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೃದಯ ಶಸ್ತ್ರಚಿಕಿತ್ಸ ಡಾ. ಆರ್.ಬಾಲಸುಬ್ರಮಣಿ ಮಾತನಾಡಿ, 10 ವರ್ಷಗಳ ಹಿಂದೆ 60 ವರ್ಷ ಮೇಲ್ಪಟ್ಟವರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರು. ಕರೊನಾ ನಂತರ 30 ವರ್ಷದವರೂ ಬೈಪಾಸ್ ಸರ್ಜರಿಗೆ ಒಳಗಾಗುತ್ತಿದ್ದಾರೆ. ಯುವಕರು ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ವಾಕಥಾನ್ ನೆಹರು ಮೈದಾನದಿಂದ ಹೊರಟು ಮಹಾವೀರ ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತದ ಮಾರ್ಗವಾಗಿ ಕುವೆಂಪು ರಸ್ತೆಯ ಎನ್.ಎಚ್.ಕ್ಲಿನಿಕ್ ಬಳಿ ಮುಕ್ತಾಯವಾಯಿತು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಟಿಎಚ್‌ಒ ಡಾ. ಚಂದ್ರಶೇಖರ್, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ವರ್ಗೀಸ್ ಪಿ. ಜಾನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್.ಎನ್.ಶೈಲೇಶ್, ಶಿವಮೊಗ್ಗ ಅಸಿಸ್ಟೆಂಟ್ ಕಮಾಂಡೆಂಟ್ ರಾಜಪ್ಪ, ಪ್ರಮುಖರಾದ ಡಾ. ಎ.ಜೆ.ಅಶ್ವಲ್, ಡಾ. ಎಂ.ಜೆ.ವಿಕ್ರಂ, ಡಾ. ಅಜಿತ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರ್ ಇದ್ದರು.

ಹೃದಯದ ಬಡಿತ ತಪ್ಪಿಸಿಕೊಳ್ಳಬೇಡಿ ಎಂಬ ಧ್ಯೇಯದೊಂದಿಗೆ ವಾಕಥಾನ್ ನಡೆಸಲಾಯಿತು. ಜಗತ್ತಿನಲ್ಲಿ ಉಂಟಾಗುತ್ತಿರುವ ಸಾವಿನ ಕಾರಣಗಳಲ್ಲಿ ಹೃದಯದ ಕಾಯಿಲೆ ಪ್ರಥಮ ಸ್ಥಾನದಲ್ಲಿದೆ. ಪ್ರತಿ ಮೂವರಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಡುತ್ತಿದ್ದಾರೆ. ನಾಲ್ಕನೇ ಒಂದು ಭಾಗ ಹೃದಯಾಘಾತ 40 ವರ್ಷದೊಳಗಿನವರಲ್ಲಿ ಆಗುತ್ತಿದೆ. -ಡಾ. ಎನ್.ಎಸ್.ಶ್ರೀವತ್ಸ, ಎನ್‌ಎಚ್ ಆಸ್ಪತ್ರೆ ಹಿರಿಯ ಹೃದ್ರೋಗ ತಜ್ಞ