ಜಿಲ್ಲೆ

ಕ್ಯೂಆರ್ ಕೋಡ್ ಸ್ಕಾೃನ್‌ಗೆ ಉತ್ತಮ ಪ್ರತಿಕ್ರಿಯೆ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕ್ಯೂ ಆರ್ ಕೋಡ್ ಸ್ಕಾೃನ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳುವ ಪ್ರಕ್ರಿಯೆಗೆ ಪ್ರಯಾಣಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರ ವಿಭಾಗದಲ್ಲಿ ದಿನಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ಡಿಜಿಟಲ್ ಪೇ ಮೂಲಕ ನಡೆಯುತ್ತದೆ. ನಗರ ವಿಭಾಗದಲ್ಲಿ ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕೆಎಸ್‌ಆರ್‌ಟಿಸಿಯ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡಲು ಡಿಜಿಟಲ್ ಮಷಿನ್‌ಅನ್ನು ಕೆಲ ತಿಂಗಳ ಹಿಂದೆ ವಿತರಣೆ ಮಾಡಲಾಯಿತು. ಇದಾದ ಬಳಿಕ ಅದೇ ಮಷಿನ್‌ನಲ್ಲಿ ಕ್ಯೂಆರ್‌ಕೋಡ್ ಸ್ಕಾೃನ್ ಮಾಡಿ ಟಿಕೆಟ್ ಹಣ ಪಾವತಿ ಮಾಡುವ ವಿಧಾನವನ್ನು ಜಾರಿಗೆ ತರಲಾಯಿತು. ಮೊದಲಿಗೆ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಮೈಸೂರು-ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದ ತಡೆರಹಿತ ಬಸ್‌ಗಳಿಗೆ ಟಿಕೆಟ್ ನೀಡುವ ಮೂಲಕ ಹೊಸ ತಂತ್ರಜ್ಞಾನದ ಬಳಕೆಗೆ ನಾಂದಿ ಹಾಡಲಾಯಿತು. ನಂತರ ಅಂತರ ರಾಜ್ಯಕ್ಕೆ ಸಂಚಾರ ಮಾಡುವ ಬಸ್‌ಗಳಲ್ಲಿ ಅಳವಡಿಸಲಾಯಿತು. ನವೆಂಬರ್ ನಿಂದ ಇಡೀ ಜಿಲ್ಲೆಯ ಎಲ್ಲ ಬಸ್‌ಗಳಲ್ಲಿ ಡಿಜಿಟಲ್ ಪೇ ಸೌಲಭ್ಯವಿದೆ. ಮೈಸೂರು ನಗರ ವಿಭಾಗದಲ್ಲೂ ಎಲ್ಲ ಬಸ್‌ಗಳಲ್ಲೂ ಈ ಸೌಲಭ್ಯವನ್ನು ಅಳವಡಿಸಲಾಗಿದೆ.

ಮೈಸೂರು ನಗರ ವಿಭಾಗದಲ್ಲಿ ವ್ಯವಸ್ಥೆ ಅಳವಡಿಸಿದ ನವೆಂಬರ್ ತಿಂಗಳಲ್ಲಿ ಕ್ಯೂ ಆರ್ ಕೋಡ್ ಸ್ಕಾೃನ್ ಮೂಲಕ 4,44,341 ರೂ. ಸಂಗ್ರಹವಾಗಿತ್ತು. ಬಳಿಕ ಡಿಸೆಂಬರ್ ತಿಂಗಳಲ್ಲಿ 24,15,780 ರೂ. ಸಂಗ್ರಹವಾಯಿತು. ತದ ನಂತರ ಜನವರಿಯಲ್ಲಿ 38,19, 530 ರೂ., ಫೆಬ್ರವರಿಯಲ್ಲಿ 42,45,568 ರೂ. ಸಂಗ್ರಹವಾಯಿತು. ಬಳಕ ಮಾರ್ಚ್ 25 ರ ವರೆಗೆ 48,22,358 ರೂ. ಸಂಗ್ರಹವಾಗಿದೆ. ಈ ಪ್ರಮಾಣ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇದೆ. ಇನ್ನೂ ಗ್ರಾಮಾಂತರ ವಿಭಾಗದಲ್ಲೂ ನಿತ್ಯ ಲಕ್ಷಾಂತರ ರೂ. ಸಂಗ್ರಹವಾಗುತ್ತಿದೆ. ಈ ಅಂಕಿ ಅಂಶವನ್ನು ಗಮನಿಸಿದರೇ ಪ್ರಯಾಣಿಕರು ಡಿಜಿಟಲ್ ಪೇಗೆ ಆಸಕ್ತಿ ತೋರುತ್ತಿದ್ದಾರೆ.

ಸ್ಕಾೃನ್ ಇದೆಯಾ?

ಡಿಜಿಟಲ್ ಸಾಕ್ಷರತೆಯನ್ನು ಹೊಂದಿರುವ ಪ್ರಯಾಣಿಕರು ಈಗ ಬಸ್‌ಗಳಿಗೆ ಹತ್ತಿದ್ದ ತಕ್ಷಣ ಸ್ಕಾೃನ್ ವ್ಯವಸ್ಥೆ ಇದಿಯಾ ಎಂದು ಕೇಳುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ವರ್ತಕರು, ವ್ಯಾಪಾರಸ್ಥರು ಹೊಸ ವ್ಯವಸ್ಥೆಯಲ್ಲಿ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಕ್ಯೂ ಆರ್ ಸ್ಕಾೃನ್ ಮಾಡಲು ಮುಂದಾಗುತ್ತಿದ್ದಾರೆ.

ಎಲ್ಲ ಭಾಗದಲ್ಲೂ ಈಗೀಗ ಜನರಿಗೆ ಡಿಜಿಟಲ್ ಪಾವತಿ ಬಗ್ಗೆ ಅರಿವು ಮೂಡುತ್ತಿದೆ. ಹಳ್ಳಿಯಿಂದ ಪಟ್ಟಣಗಳಿಗೆ ಪ್ರಯಾಣಿಸುವ ಜನರು ಅಲ್ಲಲ್ಲಿ ಸ್ಕಾೃನ್ ಮಾಡುತ್ತಿದ್ದಾರೆ. ನಾವೂ ಬಸ್ ಹತ್ತುವ ಸಂದರ್ಭದಲ್ಲೇ ಪ್ರಯಾಣಿಕರಿಗೆ ಡಿಜಿಟಲ್ ಪೇಮೆಂಟ್ ಬಗ್ಗೆ ಮಾಹಿತಿ ನೀಡುತ್ತೇವೆ. ನಮ್ಮ ಮಾತನ್ನು ಕೇಳಿದ ನಂತರ ಕೈಯಲ್ಲಿ ದುಡ್ಡು ಹಿಡಿದುಕೊಂಡು ಕುಳಿತ್ತಿದ್ದ ಪ್ರಯಾಣಿಕರು ಮೊಬೈಲ್ ತೆಗೆದು ಸ್ಕಾೃನ್ ಮಾಡಲು ಮುಂದಾಗುತ್ತಿದ್ದಾರೆ. ಕೆಲ ತಿಂಗಳು ಕಳೆದರೆ ಎಲ್ಲರೂ ಇದಕ್ಕೆ ಒಗ್ಗಿಕೊಳ್ಳುವುದು ಖಂಡಿತ’ ಎಂದು ನಿರ್ವಾಹಕರೊಬ್ಬರು ಮಾಹಿತಿಯನ್ನು ಹಂಚಿಕೊಂಡರು.

ಧ್ವನಿವರ್ಧಕದ ಮೂಲಕ ಪ್ರಸಾರ

ಮೈಸೂರು ನಗರ ವಿಭಾಗದಿಂದ ಡಿಜಿಟಲ್ ಪೇಮೆಂಟ್ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಿಟಿ ಬಸ್ ನಿಲ್ದಾಣದಲ್ಲಿ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಧ್ವನಿವರ್ಧಕದ ಮೂಲಕ ‘ಜಿಂಗಲ್’ಅನ್ನು ಪ್ರಸಾರ ಮಾಡಲಾಗುತ್ತಿದೆ. ಅಲ್ಲದೆ ಎಲ್ಲ ಬಸ್‌ನಲ್ಲಿ ಕಿಟಕಿಯ ಗಾಜು, ಮುಂದಿನ ಗಾಜು, ಹಿಂಬದಿಯ ಗಾಜಿನಲ್ಲಿ ಜನರಿಗೆ ತಕ್ಷಣಕ್ಕೆ ಕಾಣುವ ರೀತಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಜತೆಗೆ ನಿರ್ವಾಹಕರು ಮಾಹಿತಿಯನ್ನು ನೀಡುತ್ತಿದ್ದಾರೆ.

‘ಚಿಲ್ಲರೆ’ ಜಗಳ ಮಾಯ?:

ಡಿಜಿಟಲ್ ಪಾವತಿಯು ಅನೇಕ ಸಮಸ್ಯೆಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಿದೆ. ಇಪ್ಪತ್ತು-ಮೂವತ್ತು ರೂಪಾಯಿ ಟಿಕೆಟ್‌ಗೆ ಐದು ನೂರು ರೂಪಾಯಿ ಕೊಡುವುದು, ಎಂಬತ್ತೈದು, ಎಪ್ಪತ್ತೆರಡು ರೂಪಾಯಿಯ ಟಿಕೆಟ್‌ಗಳನ್ನು ನೀಡುವಾಗ ಒಂದು ರೂಪಾಯಿ, ಎರಡು ರೂಪಾಯಿಗಾಗಿ ನಿರ್ವಾಹಕರು ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ಶುರುವಾಗುವುದು, ಇದು ಮೊದಲನೇ ಟ್ರಿಪ್. ನಾ ಎಲ್ಲಿಂದ ತಂದು ಕೊಡಲಿ ಚಿಲ್ಲರೆ ಎಂದು ಕಂಡಕ್ಟರ್ ಅಸಹನೆಯಿಂದ ಇಬ್ಬರು-ಮೂವರ ಜತೆ ಕೊಟ್ಟು ಕಳುಹಿಸುವುದು, ಅವರು ಅಂಗಡಿ-ಮುಂಗಟ್ಟುಗಳ ಬಳಿ ಹೋಗಿ ಚಿಲ್ಲರೆಗೆ ಗೋಗರೆಯುವುದು ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಪರಿಹಾರ ಕಂಡತೆ ಆಗುತ್ತದೆ.

ಡಿಜಿಟಿಲ್ ಪಾವತಿಯಿಂದ ಚಿಲ್ಲರೆ ನೀಡುವ ರಗಳೆ ಇಲ್ಲವಾಗಿದೆ. ಕೆಎಸ್‌ಆರ್‌ಟಿಸಿಯು ಉತ್ತಮವಾದ ಕೆಲಸ ಮಾಡಿದೆ. ನಗರ ಪ್ರದೇಶಗಳಲ್ಲಿ ವಿದ್ಯಾವಂತ ಜನರು ಹೆಚ್ಚಾಗಿ ಇರುವುದರಿಂದ ಅವರಿಗೆ ಮಾಹಿತಿ ಅವಶ್ಯಕತೆ ಅಷ್ಟಾಗಿ ಬೇಕಾಗಿಲ್ಲ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಹಳ್ಳಿ-ಹಳ್ಳಿಗಳಿಗೆ ಈ ವಿಚಾರವನ್ನು ಸಮರ್ಪಕವಾಗಿ ಮುಟ್ಟಿಸಬೇಕು. ಹೋಬಳಿ ಮಟ್ಟದ ಬಸ್ ಸ್ಟಾೃಂಡ್, ಊರುಗಳ ಬಸ್ ನಿಲ್ದಾಣಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಪ್ರಚಾರ ಮಾಡುವ ಅವಶ್ಯಕತೆ ಇದೆ ಎಂದು ಪ್ರಯಾಣಿಕ ವಿನೋದ್ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕ್ಯೂಆರ್‌ಕೋಡ್ ಸ್ಕಾೃನ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳುವ ಪ್ರಕ್ರಿಯೆಗೆ ಪ್ರಯಾಣಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈಸೂರು ನಗರ ವಿಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನವೆಂಬರ್ ತಿಂಗಳಲ್ಲಿ ಕ್ಯೂಆರ್‌ಕೋಡ್ ಸ್ಕಾೃನ್ ಮೂಲಕ 4,44,341 ರೂ. ಸಂಗ್ರಹವಾಗಿತ್ತು. ಫೆಬ್ರವರಿಯಲ್ಲಿ 42,45,568 ರೂ. ಸಂಗ್ರಹವಾಯಿತು. ಬಳಕ ಮಾರ್ಚ್ 25 ರ ವರೆಗೆ 48,22,358 ರೂ. ಸಂಗ್ರಹವಾಗಿದೆ. ಎಚ್.ಟಿ.ವೀರೇಶ್ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿ ಮೈಸೂರು ನಗರ ವಿಭಾಗ