ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ಗಮನ ಸೆಳೆಯಿತು.
ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 8 ವರ್ಷದ ಬಾಲಕರಿಂದ 65 ವರ್ಷದ ಪುರುಷ, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಆನ್‌ಲೈನ್ ಮೂಲಕ 1,425 ಸ್ಪರ್ಧಿಗಳು ನೋಂದಣಿಯಾಗಿದ್ದರು. ಸ್ಪರ್ಧಾ ಸ್ಥಳದಲ್ಲೂ ನೋಂದಣಿಗೆ ಅವಕಾಶ ಮಾಡಿಕೊಡಲಾಯಿತು. ಅಂದಾಜು 1,600 ಸ್ಪರ್ಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ವಯೋಮಾನದ ಅನುಗುಣವಾಗಿ ವಿವಿಧ ಯೋಗಾಸನಗಳನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
14 ವಿವಿಧ ವೇದಿಕೆಗಳಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ವೇದಿಕೆಗೆ ನಾಲ್ಕು ತೀರ್ಪುಗಾರರು ಸ್ಪರ್ಧಿಗಳ ಯೋಗ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿದರು.
ಪ್ರತಿ ಸ್ಪರ್ಧಿಗೆ ತೀರ್ಪುಗಾರರು ನಿಗದಿಪಡಿಸಿದ 5 ಯೋಗಾಸನಗಳನ್ನು ಪ್ರದರ್ಶಿಸಿದರು.
ಅದರಲ್ಲಿ ಯಾರಿಗೆ ಅತಿ ಹೆಚ್ಚು ಅಂಕ ಗಳಿಸುತ್ತಾರೋ ಅವರನ್ನು ವಿಜೇತರು ಎಂದು ಘೋಷಿಸಲಾಯಿತು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ್ದ ಸ್ಪರ್ಧಿಗಳಿಗೆಲ್ಲ ಪ್ರಮಾಣ ಪತ್ರ ನೀಡಿ ಉತ್ತೇಜನ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ವಿಶ್ವಕ್ಕೆ ಯೋಗದ ಗುರುವಾಗಿ ಭಾರತವಿದ್ದರೆ, ಅದೇ ರೀತಿ ಕರ್ನಾಟಕಕ್ಕೆ ಯೋಗ ಗುರುವಾಗಿ ಮೈಸೂರು ಇದೆ. ಯೋಗ ಆರೋಗ್ಯ ಹಾಗೂ ಮನಃ ಶಾಂತಿಯನ್ನು ಹೆಚ್ಚಿಸುತ್ತದೆ ಎಂದರು.
ಮೈಸೂರು ದಸರಾದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರವು ಬಹಳ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು, ದಸರಾ ಎಂದರೆ ಕಲೆ, ಸಂಸ್ಕೃತಿ ಬಿಂಬಿಸುವುದರ ಜತೆಗೆ ಆರೋಗ್ಯದ ನಿಟ್ಟಿನಲ್ಲಿ ಯೋಗಕ್ಕೆ ಮೈಸೂರು ದಸರಾದಲ್ಲಿ ಪ್ರಾಮುಖ್ಯ ನೀಡಲಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಬಾರಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಮೈಸೂರಿನಲ್ಲಿ ಆಚರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಾಯಿತು. ಒಲಿಂಪಿಕ್ ಕ್ರೀಡಾಕೂಟಕ್ಕೆ ಯೋಗವನ್ನು ಕೂಡ ಸೇರಿಸಲಾಗಿದ್ದು, ಅದರಲ್ಲಿ ಹೆಚ್ಚಿನ ಪದಕವನ್ನು ಭಾರತವೇ ಗೆಲ್ಲುವ ವಿಶ್ವಾಸವಿದೆ ಎಂದರು.
ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ಗಣೇಶ್ ಕುಮಾರ್, ಯೋಗ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷೆ ಡಿ.ಎಂ.ರಾಣಿ, ಕಾರ್ಯದರ್ಶಿ ಡಾ.ಪುಷ್ಪಾ ಇನ್ನಿತರರಿದ್ದರು