ಜಿಲ್ಲೆ

ಹನೂರಿನಲ್ಲೂ ಉತ್ತಮ ಪ್ರತಿಕ್ರಿಯೆ

ಲೋಕೇಶ್ ಮನು. ಡಿ

ಹನೂರು: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಅನ್ಯಾಯವೆಸಗಿದೆ ಎಂದು ಆರೋಪಿಸಿ ಶುಕ್ರವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಹನೂರಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಬಂದ್ ಹಿನ್ನೆಲೆ ಹನೂರು ಹಾಗೂ ರಾಮಾಪುರದಲ್ಲಿ ಸ್ವಯಂಪ್ರೇರಿತವಾಗಿ ಹೋಟೆಲ್, ಹಣ್ಣು, ತರಕಾರಿ ಅಂಗಡಿ ಹಾಗೂ ಇನ್ನಿತರ ಅಂಗಡಿ ಮುಂಗಟ್ಟು ಮುಚ್ಚಿ ಮಾಲೀಕರು ವ್ಯಾಪಾರ ಸ್ಥಗಿತಗೊಳಿಸಿದ್ದರು. ಬಂದ್ ತಿಳಿಯದೆ ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸಿದ್ದ ಕೆಲ ಜನರು ಹೋಟೆಲ್‌ಗಳಿಲ್ಲದ ಪರಿಣಾಮ ತಿಂಡಿಗಾಗಿ ತೊಂದರೆ ಅನುಭವಿಸಿದರು. ಇನ್ನು ಈ ಭಾಗದಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಬೆಳಗ್ಗೆ 9 ಗಂಟೆಯತನಕ ಕೆಲವು ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದವು. ಬಳಿಕ ರಸ್ತೆಗಿಳಿದ ರೈತ ಸಂಘಟನೆಯಿಂದ ಬಸ್ ಸಂಚಾರ ಸ್ಥಗಿತಗೊಂಡಿತು.
ಇನ್ನು ಸರ್ಕಾರಿ ಕಚೇರಿಗಳು ತೆರೆದಿದ್ದರೂ ಜನರಿಲ್ಲದ ಪರಿಣಾಮ ಬಿಕೋ ಎನ್ನುತ್ತಿದ್ದವು. ಅಧಿಕಾರಿಗಳು ಕಚೇರಿ ಕಾರ್ಯನಿರ್ವಹಿಸಿದರು. ಜತೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಒಟ್ಟಾರೆ ಹನೂರಿನಲ್ಲಿ ಬಂದ್ ಯಶಸ್ವಿಯಾಯಿತು.


ಜೈಲು ಚಲೋ ಚಳವಳಿ ಎಚ್ಚರಿಕೆ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರೈತ ಹಾಗೂ ಕನ್ನಡಪರ ಸಂಘಟನೆಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ರಾಮಾಪುರ ಎಲ್ಲೇಮಾಳ ವಿಭಜಕ ರಸ್ತೆಯಿಂದ ಹೊರಟ ಪ್ರತಿಭಟನಾಕಾರರು ಮುಖ್ಯ ರಸ್ತೆಯ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯವರೆಗೆ ತೆರಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಪರಿಣಾಮ ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಮಳೆಯಿಲ್ಲದ ಪರಿಣಾಮ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕೃಷಿ ನೀರಾವರಿಗೆ ತೊಡಕಾಗಿದ್ದು, ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದೊದಗಿದೆ. ಇದನ್ನು ಅರಿಯದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜೈಲು ಚಲೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಸಿರು ಸೇನೆ ಮತ್ತು ರೈತ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಕೊಳ್ಳೇಗಾಲ ತಾಲೂಕು ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ, ಕಾರ್ಯದರ್ಶಿ ಪೂಂಗುಡಿ, ರೈತ ಹಾಗೂ ಕನ್ನಡಪರ ಸಂಘಟನೆಯ ಮುಖಂಡರಾದ ರವಿನಾಯ್ಡು, ವೇಲುಸ್ವಾಮಿ, ಶಿವಲಿಂಗ, ಶಾಹಿಲ್, ಕೌಶಿಕ್ ಇತರರು ಇದ್ದರು.