ಜಿಲ್ಲೆ

ರಸ್ತೆ ಓಟಕ್ಕೆ ಉತ್ತಮ ಪ್ರತಿಕ್ರಿಯೆ

ಅವಿನಾಶ್ ಜೈನಹಳ್ಳಿ

ಮೈಸೂರು ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಷನ್ ಆಯೋಜಿಸಿದ್ದ ‘ರಸ್ತೆ ಓಟ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಆರ್.ಎಂ.ಎಂ. ವಿಜಯಲಕ್ಷ್ಮಿ ನಾರಾಯಣಸಿಂಗ್ ಮೆಮೋರಿಯಲ್ ರೋಡ್‌ರೇಸ್ ಆರೋಗ್ಯಕ್ಕಾಗಿ ಓಟ ಅಥ್ಲೆಟಿಕ್ಸ್ ಸಂಭ್ರಮ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಓಟದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪುಟಾಣಿಗಳು ಓಡಿ ಸಂಭ್ರಮಿಸಿದರು.

10 ವರ್ಷದ ಒಳಗಿನ ಬಾಲಕ-ಬಾಲಕಿಯರಿಗೆ 100 ಮೀ. ಓಟ, 12 ವರ್ಷ ಒಳಗಿನ ಬಾಲಕ, ಬಾಲಕಿಯರಿಗೆ 1 ಕಿ.ಮೀ. ಓಟ, 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 2 ಕಿ.ಮೀ. ಓಟ, 17 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 4 ಕಿ.ಮೀ.ಓಟ, 20 ವರ್ಷದೊಳಗಿನ ಯುವಕ,ಯುವತಿಯರಿಗೆ 5 ಕಿ.ಮೀ.ಓಟ ಹಾಗೂ 35 ವರ್ಷದಿಂದ 65 ವರ್ಷ ಮೇಲ್ಪಟ್ಟವರಿಗೆ 1 ಕಿ.ಮೀ. ಓಟ ಹೀಗೆ ನಾನಾ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಆರಂಭಗೊಂಡ ಓಟ, ನಗರದ ನಾನಾ ಭಾಗದಲ್ಲಿ ಸಂಚರಿಸಿ ಮತ್ತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಅಂತ್ಯಗೊಂಡಿತು. ಶಾಸಕ ಕೆ.ಹರೀಶ್‌ಗೌಡ ಓಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂಥ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸಬೇಕು. ಬಹುಮಾನ ಗೆಲ್ಲುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.

ಪಾಲಿಕೆ ಸದಸ್ಯ ಗೋಪಿ, ಅಸೋಸಿಯೇಷನ್ ಪದಾಧಿಕಾರಿಗಳಾದ ಶ್ರೀಕಾಂತ್, ಸತ್ಯನಾರಾಯಣ್, ಯೋಗೇಂದ್ರ ಸೇರಿದಂತೆ ಇತರರಿದ್ದರು.
ಪ್ರತಿ ವಿಭಾಗದಲ್ಲಿ ಮೊದಲ 6 ಸ್ಥಾನ ಪಡೆದ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ, ಮೊದಲ ಮೂರು ಸ್ಥಾನಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಯಿತು. ಓಟದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಓಟದ ಉದ್ದಕ್ಕೂ ನೀರು, ಹಣ್ಣು ನೀಡಲಾಯಿತು.