ಕಾರವಾರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಹಾಗೂ ಶನಿವಾರ ಉತ್ತಮ ಮಳೆಯಾಗಿದೆ. ಶನಿವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 6.4 ಮಿಮೀ ಮಳೆಯಾಗಿದೆ.
ಅಂಕೋಲಾದಲ್ಲಿ 6.2 ಮಿಮೀ , ಭಟ್ಕಳ-11.5, ಹಳಿಯಾಳ-0.3, ಹೊನ್ನಾವರ-9.4, ಕಾರವಾರ-18,ಕುಮಟಾ-18, ಮುಂಡಗೋಡ-1.4, ಸಿದ್ದಾಪುರ-1.1, ಶಿರಸಿ-7.2, ಜೊಯಿಡಾ-7.6, ಯಲ್ಲಾಪುರ-3.7, ದಾಂಡೇಲಿ-0.1 ಮಿಮೀ ಮಳೆಯಾಗಿದೆ.
ಜಿಲ್ಲೆಯ ಮೇ ತಿಂಗಳ ವಾಡಿಕೆ ಮಳೆಯು 22.7 ಮಿಮೀ ಇದ್ದು, ಇದುವರೆಗೆ 18.9 ಮಿಮೀ ಮಳೆಯಾಗಿದೆ. ಮಳೆ ಇನ್ನೂ ಕೆಲ ದಿನ ಮುಂದುವರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 18 ಹಾಗೂ 19ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಮೇ 20ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಶಿರಸಿ ತಾಲೂಕಲ್ಲೂ ಉತ್ತಮ ಮಳೆ: ಶಿರಸಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಸಂಜೆ ತುಂತುರು ಮಳೆಯಾಗಿದೆ.
ಸಂಜೆಯ ವೇಳೆ ದಟ್ಟನೆಯ ಮೋಡ ಕಟ್ಟಿ, ಗುಡುಗು ಆರಂಭಗೊಂಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜನತೆಯೂ ಮಳೆಯ ನಿರೀಕ್ಷೆಯಲ್ಲಿದ್ದರು. ಸಂಜೆ ಏಳುಗಂಟೆಯ ವೇಳೆ ತಾಲೂಕಿನ ಬಹುತೇಕ ಕಡೆ ಮಳೆ ಸುರಿಯಿತು.