oppo_2 
ಜಿಲ್ಲೆ

ತಾಲೂಕಿನಾದ್ಯಂತ ಉತ್ತಮ ಮಳೆ

ಬಾಲಮುರಳಿಕೃಷ್ಣ

ಹನೂರು: ತಾಲೂಕಿನ ಎಲ್ಲೆಡೆ ಶುಕ್ರವಾರ ರಾತ್ರಿಯಿಂದ ಬೆಳಗ್ಗೆವರೆಗೆ ಉತ್ತಮ ಮಳೆಯಾದ್ದರಿಂದ ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಕೆರೆಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಲವು ಕೃಷಿ ಜಮೀನುಗಳಿಗೆ ನೀರು ನುಗ್ಗಿರುವುದರ ಜತೆಗೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.


ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ಮಳೆಯಾಗದ ಕಾರಣ ಕೃಷಿಗೆ ಹಿನ್ನಡೆಯಾಗಿತ್ತು. ಇದರಿಂದ ರೈತರು ಮಳೆಗಾಗಿ ಕಾದು ಕುಳಿತ್ತಿದ್ದರು. ಆದರೆ ಕಳೆದ 2 ದಿನಗಳಿಂದ ಕೃಷಿಗೆ ಅನುಕೂಲವಾಗುವಂತೆ ಆಗಾಗ್ಗೆ ಮಳೆಯಾಗುತ್ತಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ತಾಲೂಕಿನಾದ್ಯಂತ ಶುಕ್ರವಾರ ಇಡೀ ರಾತ್ರಿ ಜೋರು ಮಳೆ ಸುರಿಯಿತ್ತಲ್ಲದೇ ಬೆಳಗ್ಗೆ 10ರವರೆಗೂ ತನ್ನ ಆರ್ಭಟವನ್ನು ಮುಂದುವರಿಸಿತ್ತು. ಇದರಿಂದ ಜಲಾಶಯ ಹಾಗೂ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚಾದರೆ, ಹಳ್ಳಕೊಳ್ಳಗಳಲ್ಲಿ ಯಥೇಚ್ಛವಾದ ನೀರು ಹರಿಯಿತು. ಇನ್ನು ಬರಿದಾಗಿ ನಿಂತಿದ್ದ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲುವಂತಾಯಿತು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುವುದರ ಮೂಲಕ ಕೃಷಿಗೆ ಅನುಕೂಲವಾಗಿದೆ.


ಆದರೆ ಬೆಳಗ್ಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೆಲಸ ಕಾರ್ಯಗಳ ನಿಮಿತ್ತ ತಾಲೂಕು ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು. ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು. ಕೆಲಸ ಕಾರ್ಯಗಳ ನಿಮಿತ್ತ ಬೈಕ್‌ನಲ್ಲಿ ತೆರಳುತ್ತಿದ್ದವರು ಬಸ್ಸನ್ನು ಅವಲಂಬಿಸಿದ್ದರು. ತಾಲೂಕು ಕೇಂದ್ರ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಜನರ ಸಂಚಾರ ವಿರಳವಾಗಿತ್ತು. ವ್ಯಾಪಾರ, ವಹಿವಾಟು ಕ್ಷೀಣಿಸಿತ್ತು. ಕೆಲವು ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು. ಜಿಟಿಜಿಟಿ ಮಳೆಯ ನಡುವೆಯೂ ಮನೆಮನೆಗೆ ಹಾಲು, ಪತ್ರಿಕೆ ವಿತರಿಸುವ ಕೆಲಸ ಮಾಡುವ ಹುಡುಗರು ತೊಂದರೆ ಅನುಭವಿಸಿದರು. ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮನೆಯಲ್ಲೇ ಕಾಲ ಕಳೆಯುವಂತಾಯಿತು. ಇದರಿಂದ ಜನರ ಎಲ್ಲ ಕಾರ್ಯಚಟುವಟಿಕೆ ಸ್ತಬ್ಧಗೊಂಡಿತ್ತು.


ಸೇತುವೆ ಮೇಲೆ ಹರಿದ ನೀರು: ಉತ್ತಮ ಮಳೆಯಿಂದಾಗಿ ಬರಿದಾಗಿ ನಿಂತಿದ್ದ ತಟ್ಟೆಹಳ್ಳದಲ್ಲಿ ನೀರು ಹರಿಯುತ್ತಿರುವುದು ಒಂದೆಡೆಯಾದರೆ, ಆರ್.ಎಸ್ ದೊಡ್ಡಿ, ಆನಾಪುರ, ಕಣ್ಣೂರು ಹಾಗೂ ತಾಲೂಕಿನಲ್ಲಿ ಇನ್ನಿತರ ಕೆಲವು ಕೆರೆಗಳು ಭರ್ತಿಗೊಂಡಿರುವುದು ಖುಷಿಯ ವಿಚಾರ. ಆದರೆ ಕೆಲವು ಜಮೀನುಗಳಿಗೆ ನೀರು ನುಗ್ಗಿರುವುದು ರೈತರನ್ನು ಚಿಂತೇಗೀಡು ಮಾಡಿದೆ. ಇನ್ನು ಈ ಮಳೆಯಿಂದಾಗಿ ತಾಲೂಕಿನ ಕೆಲವು ಮುಖ್ಯ ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ಸಣ್ಣ ಕೆರೆಯಂತಾಗಿತ್ತು. ಇದರಿಂದ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವುದರ ಮೂಲಕ ತೊಂದರೆ ಅನುಭವಿಸಿದರು. ಪಟ್ಟಣದ ಕೆಲವು ವಾರ್ಡ್‌ಗಳ ರಸ್ತೆಯ ಗುಂಡಿಗಳಲ್ಲೂ ನೀರು ನಿಲ್ಲುವಂತಾಗಿತ್ತು. ಜನರು ಸಂಚರಿಸಲು ಕಿರಿಕಿರಿ ಅನುಭವಿಸಿದರು. ಪಟ್ಟಣದ ಸ್ವಾಮಿಹಳ್ಳವು ಮೈದುಂಬಿ ಹರಿಯಿತು. ಇದರಿಂದ ಚಿಂಚಳ್ಳಿ ಮಾರ್ಗದ ಕಿರು ಸೇತುವೆಯ ಮೇಲೆ ಗಂಟೆಗಟ್ಟಲೇ ನೀರು ಹರಿಯಿತು. ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸುತ್ತಿ ಬಳಸಿ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.


ಹಾಗಾಗಿ ಈ ಮಳೆ ರೈತರಲ್ಲಿ ಸಂತಸವನ್ನು ಉಂಟು ಮಾಡಿದರೆ, ರಸ್ತೆಗಳಲ್ಲಿ ಹರಿದ ನೀರಿನಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.