ಹನೂರಿನ ಸ್ವಾಮಿಹಳ್ಳದಲ್ಲಿ ನೀರು ಹರಿಯುತ್ತಿರುವುದು. 
ಜಿಲ್ಲೆ

ಹನೂರು ತಾಲೂಕಿನಾದ್ಯಂತ ಉತ್ತಮ ಮಳೆ

ಎಂ.ರವಿ

ಹನೂರು: ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಹಳ್ಳ-ಕೊಳ್ಳಗಳಲ್ಲಿ ನೀರು ಹರಿದಿದೆ. ಇದರಿಂದ ಅಂತರ್ಜಲ ಮಟ್ಟ ಕೊಂಚ ಸುಧಾರಿಸಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದ್ದರೆ ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ತಾಲೂಕಿನಲ್ಲಿ ಈ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಬರ ಪರಿಸ್ಥಿತಿ ಎದುರಾಗಿತ್ತು. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿ, ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಇದರಿಂದ ಅಧಿಕಾರಿಗಳು ಹೈರಾಣಾಗಿದ್ದರು. ಇನ್ನು ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು. ಜತೆಗೆ ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಗೆ ಹಿನ್ನಡೆಯಾಗಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇತ್ತ ವಿಪರೀತ ಬಿಸಿಲಿನ ಬೇಗೆಗೆ ಜನರು ಬಸವಳಿದಿದ್ದರು. ಆದರೆ ವಾರದ ಹಿಂದೆ ತಾಲೂಕಿನ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿತ್ತು. ಜತೆಗೆ ಕಳೆದ 3 ದಿನದ ಹಿಂದೆಯೂ ಜೋರು ಮಳೆ ಸುರಿದಿತ್ತು. ಇದರಿಂದ ಬಿಸಿಲಿನ ಬೇಗೆಯಿಂದ ಬಳಲುತಿದ್ದ ಜನತೆಗೆ ಮಳೆ ತಂಪು ಅನುಭವ ನೀಡಿತ್ತು. ಆದರೆ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯುವಷ್ಟು ಮಟ್ಟಿಗೆ ಮಳೆಯಾಗಿರಲಿಲ್ಲ. ಆದರೆ ಸೋಮವಾರ ರಾತ್ರಿ ತಾಲೂಕಿನ ವಿವಿಧೆಡೆ ಸುಮಾರು 2 ಗಂಟೆಗಳವರೆಗೆ ಉತ್ತಮ ಮಳೆಯಾಗಿರುವುದರಿಂದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳಲ್ಲಿ ನೀರು ನಿಂತಿವೆ.

ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹ: ಸೋಮವಾರ ರಾತ್ರಿ ಧಾರಾಕಾರ ಮಳೆಯಿಂದಾಗಿ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇತ್ತ ಹಳ್ಳ-ಕೊಳ್ಳಗಳಲ್ಲಿ ನೀರು ಹರಿದಿದೆ. ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಧಿಕಾರಿಗಳೂ ನಿರಾಳರಾಗಿದ್ದಾರೆ. ಜಾನುವಾರುಗಳಿಗೂ ನೀರಿನ ಸಮಸ್ಯೆ ನೀಗಿದ್ದು, ಕೃಷಿಗೂ ಅನುಕೂಲವಾಗಿದೆ. ಇನ್ನು ಕಳೆದ ವಾರದಿಂದೀಚೆಗೆ ಸುರಿದ ಮಳೆಯಿಂದಾಗಿ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಒಣಗಿ ನಿಂತಿದ್ದ ಮರಗಳು ಚಿಗುರೊಡೆದಿವೆ. ಇನ್ನು ಹಳ್ಳ-ಕೊಳ್ಳಗಳಲ್ಲಿ ನೀರು ಹರಿದಿರುವುದರಿಂದ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕೊಂಚ ನೀಗಿದಂತಾಗಿದೆ.